ಮೊನ್ನೆಯ ದಿನ ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದೆವು. ಆ ದಿನ ಏಳು ಸುತ್ತಿನ ಕೋಟೆಯಂದೇ ಪ್ರಸಿದ್ಧವಾದ ಚಿತ್ರದುರ್ಗದ ಕೋಟೆಯನ್ನು ವೀಕ್ಷಿಸುವ ಸೌಭಾಗ್ಯ ನಮ್ಮದಾಗಿತ್ತು. ಇಲ್ಲಿ ಮೊದಲನೆಯ ಬಾಗಿಲ ಹತ್ತಿರ ಇರುವ ಗೋಡೆಯ ಮೇಲೆ ಸರ್ಪದ ಚಿತ್ರವಿದ್ದುದರಿಂದ ಈ ಏಳು ಸುತ್ತಿನ ಕೋಟೆಯಲ್ಲಿ ಸರ್ಪದ ಹಾಗೆ ವೇಗವಾಗಿ ನಡೆದಾಡಬೇಕಾಗುತ್ತದೆ. ನಾವು ಮೊದಲನೆಯ ಬಾಗಿಲ ಹತ್ತಿರ ಹೋದೆವು. ದೊಡ್ಡ ದೊಡ್ಡ ದ್ವಾರ ಬಾಗಿಲು ಇದ್ದು, ಇಲ್ಲಿ ಹೈದರಾಲಿಯ ಸೈನ್ಯವು ಆಗಾಗ ದಾಳಿ ಮಾಡುತ್ತಿದ್ದುದರಿಂದ ಕೋಟೆಯ ರಕ್ಷಣೆಗಾಗಿ ಒಳಗೆ ಬರಬಾರದೆಂದು ಮುಖ್ಯದ್ವಾರ ಬಾಗಿಲನ್ನು ಮುಚ್ಚುತ್ತಿದ್ದರು.
ಹೈದರಾಲಿಯ ಸೈನ್ಯವು ಕೋಟೆಯ ಒಳಗೆ ಹೋಗಲು ಆನೆಗಳನ್ನು ಬಳಸಿಕೊಂಡು ದ್ವಾರಬಾಗಿಲು ಒಡೆಯಲು ಪ್ರಯತ್ನ ಮಾಡುತ್ತಿದ್ದುದರಿಂದ ಚಿತ್ರದುರ್ಗದ ಕೋಟೆಯಲ್ಲಿ ಆನೆಯು ದ್ವಾರದ ಬಾಗಿಲು ಒಡೆಯಬಾರದು ಎಂಬ ಉದ್ದೇಶದಿಂದ ಆನೆಯು ದ್ವಾರಬಾಗಿಲನ್ನು ಒಡೆಯಲು ಹಿಂದಿನಿಂದ ಜೋರಾಗಿ ಓಡಿ ಬರಬೇಕು. ಹೀಗೆ ಆನೆಗೆ ಓಡಿ ಬರಬಾರದೆಂದು ಗೋಡೆಯನ್ನು ಕಟ್ಟಿದ್ದಾರೆ.
ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ಸುತ್ತಿ ಬರುವಷ್ಟರಲ್ಲಿ ನಮಗೆಲ್ಲಾ ಸುಸ್ತಾಗಿ ಉಸ್ಸೆಂದು ನಿಟ್ಟುಸಿರು ಬಿಟ್ಟೆವು. ಆ ಕೋಟೆಯನ್ನು `ಚಿತ್ರದುರ್ಗದ ಕಲ್ಲಿನ ಕೋಟೆ’, `ಉಕ್ಕಿನ ಕೋಟೆ’ ಎಂದು ಏಕೆ ಕರೆಯುತ್ತಾರೆಂದರೆ, ಅಲ್ಲಿರುವ ಪ್ರತೀ ಕಲ್ಲಿನಲ್ಲೂ ಒಂದೊಂದು ವಿಶೇಷವಾದ ಐತಿಹಾಸಿಕ ಹಿನ್ನೆಲೆಯ ಮಹತ್ವದ ಕಥೆಯನ್ನು ಸ್ವಾರಸ್ಯಕರವಾಗಿ ತಿಳಿಸಿಕೊಡುತ್ತವೆ. ಆದ್ದರಿಂದ ಆ ಕೋಟೆಯನ್ನು ಚಿತ್ರದುರ್ಗದ ಉಕ್ಕಿನ ಕೋಟೆ ಎನ್ನುವರು.
ಅಲ್ಲಿರುವ ವೀರ ಮದಕರಿ ರಾಜನನ್ನು ಹೈದರಾಲಿಯ ಸೈನ್ಯವು ಸೋಲಿಸಿ ಬಂಧಿಸಿದ್ದುದರಿಂದ ರಾಜನ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಜಾಗಕ್ಕೆ ವಿಶೇಷವಾದ ಹೆಸರುಗಳಿಂದ ಕರೆಯುವುದು ವಾಡಿಕೆ. ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಜಾಗವನ್ನು ಅಕ್ಕನ ಹೊಂಡ ಎಂದು ಕರೆಯುತ್ತಾರೆ. ತಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಜಾಗವನ್ನು ತಂಗಿಯ ಹೊಂಡ ಎಂದು ಕರೆಯುತ್ತಾರೆ. ಕೋಟೆಯ ಮೇಲೆ ದೊಡ್ಡ ದೊಡ್ಡ ಗೋಡೆಗಳಿವೆ. ಆ ಗೋಡೆಯ ಮೇಲೆ ನಿಂತ ಕಾವಲುಗಾರರ ಪಡೆಯು ಯಾರಾದರೂ ಶತ್ರುಗಳ ಸೈನಿಕರು ದಾಳಿ ಮಾಡಬಹುದು ಎಂದು ಕಾವಲಿನವರು ಕಾಯುತ್ತಿದ್ದರು.
ಅಲ್ಲೇ ತುಪ್ಪದ ಹೊಂಡವಿದೆ. ಏಕೆಂದರೆ ಯುದ್ಧ ಮಾಡುವಾಗ ಜನರು ಹೊರ ಬರಬಾರದೆಂಬ ವಿಶೇಷ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಿರ್ಮಿಸಿದ್ದಾರೆ.
ಚಿತ್ರದುರ್ಗದ ಕೋಟೆಯ ಅತ್ಯಂತ ವಿಶೇಷ ಆಕರ್ಷಣೆಯೆಂದರೆ ಒನಕೆ ಓಬವ್ವನ ಐತಿಹಾಸಿಕ ಕಿಂಡಿ. ಒನಕೆ ಓಬವ್ವನ ಸಮಾಧಿ ಮತ್ತು ಅವಳು ಪೂಜೆ ಮಾಡಿದ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ. ಹೈದರಾಲಿ ಸೈನ್ಯದ ಸೈನಿಕರು ಕಳ್ಳ ಕಿಂಡಿಯ ಮೂಲಕ ಒಳನುಸುಳುತ್ತಿರುವುದನ್ನು ನೋಡಿದಾಗ ಒನಕೆ ಓಬವ್ವ ಗಂಡನಿಗೆ ಊಟಕ್ಕೆ ಬಡಿಸಿದ್ದಳು. ಆದರೆ ಕುಡಿಯಲು ನೀರು ಇಲ್ಲದಿರುವುದನ್ನು ಗಮನಿಸಿ, ನೀರು ತರಲು ಹೋದ ಜಾಗವು ಇದೆ. ಸೈನಿಕರು ಯುದ್ಧ ಮಾಡಲು ಬರುತ್ತಿದ್ದ ಕಿಂಡಿಯೂ ಇದೆ. ಅವರು ಬರುವ ಸಮಯದಲ್ಲಿ ಅವಳು ಒನಕೆಯನ್ನು ತೆಗೆದುಕೊಂಡು ಬಂದು ಅವರನ್ನು ಸಾಯಿಸುತ್ತಾಳೆ ಮತ್ತು ಹೋರಾಡುತ್ತಾ, ಹೋರಾಡುತ್ತಾ ವೀರ ಮರಣ ಹೊಂದುತ್ತಾಳೆ. ಈ ಸ್ಥಳದಲ್ಲಿ ಸಾಕಷ್ಟು ಸಿನಿಮಾ ಶೂಟಿಂಗ್‌ಗಳನ್ನು ಮಾಡಿದ್ದಾರೆ. ಆ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿರುವ ಪ್ರತಿಯೊಂದು ಕಲ್ಲುಗಳು ಒಂದೊಂದು ಇತಿಹಾಸದ ದ್ಯೋತಕಗಳಾಗಿವೆ. ಆ ಕೋಟೆಗಳಲ್ಲಿ ಮೊಲದ ಕಿವಿಯ ಹಾಗೆ, ಆನೆಯು ಮಲಗಿರುವ ಹಾಗೆ ಇನ್ನೂ ಮುಂತಾದ ಭಂಗಿಗಳು ನೋಡಲು ಆಕರ್ಷಿಸುತ್ತವೆ. ಒಟ್ಟಾರೆಯಾಗಿ ಚಿತ್ರದುರ್ಗದ ಕೋಟೆಯ ವೀಕ್ಷಣೆ ತುಂಬಾ ಖುಷಿ ಕೊಟ್ಟಿತು.
– ಕು. ಮೇಘಾ ಮುದೇನೂರ.
8ನೇ ತರಗತಿ, ಸರಕಾರಿ ಪ್ರೌಢಶಾಲೆ-ಮೆಣಸಗಿ.