ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಲತಂದೆಯೊಬ್ಬ 18 ವರ್ಷದ ಮಗನನ್ನು ಹತ್ಯೆಗೈದಿರುವ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುದೀಪ್ ಎಂಬಾತ ತನ್ನ ಮಲಮಗ ಸೋಹಮ್ ದಾಸ್ನನ್ನು ಕೊಂದು, ಪತ್ನಿ ಸೀಮಾ ದಾಸ್ ಮೇಲೆಯೂ ಹಲ್ಲೆ ನಡೆಸಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದು ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನವೆಂಬರ್ 16ರ ರಾತ್ರಿ ಮನೆಯಲ್ಲಿ ದಂಪತಿ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಈ ವೇಳೆ ಸುದೀಪ್ ಮಗ ಸೋಹಮ್ನನ್ನು ಹತ್ಯೆಗೈದು, ಪತ್ನಿ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಮನೆಯಲ್ಲಿ ನಡೆದಿದ್ದ ಘಟನೆ ಮೂರು ದಿನಗಳವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ.
ಮೂರು ದಿನಗಳ ಕಾಲ ಮನೆಯಲ್ಲೇ ನರಳಾಡಿದ ತಾಯಿ:
ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಈ ಹಿಂದೆ ಅಪಾರ್ಟ್ಮೆಂಟ್ ಮಾಲೀಕರಿಗೆ ದೂರು ನೀಡಿದ್ದರು. ಮನೆ ಮಾಲೀಕರು ಕೂಡ ದಂಪತಿಗೆ ಜಗಳ ಮಾಡದಂತೆ ಎಚ್ಚರಿಕೆ ನೀಡಿದ್ದರು. ನವೆಂಬರ್ 16ರ ರಾತ್ರಿ ಮತ್ತೆ ಜೋರಾಗಿ ಗಲಾಟೆ ಕೇಳಿಬಂದಿದ್ದರೂ, ಸ್ವಲ್ಪ ಸಮಯದ ಬಳಿಕ ಶಾಂತವಾಗಿದ್ದರಿಂದ ನೆರೆಹೊರೆಯವರು ಅದನ್ನು ಸಾಮಾನ್ಯ ಜಗಳವೆಂದು ಭಾವಿಸಿದ್ದರು.
ಆದರೆ, ಮೂರು ದಿನಗಳಾದರೂ ಸೀಮಾ ದಾಸ್ ಹಾಗೂ ಸೋಹಮ್ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಮನೆಗೆ ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೀಗ ತೆರೆಸಿದಾಗ ಬಯಲಾಯ್ತು ಭೀಕರ ಘಟನೆ:
ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಸಹಾಯದಿಂದ ಮನೆಯ ಬೀಗ ತೆರೆಸಿದ್ದಾರೆ. ಈ ವೇಳೆ ಮನೆಯೊಳಗಿನ ಕೊಠಡಿಯಿಂದ ಸೀಮಾ ದಾಸ್ ಕೂಗುತ್ತಿರುವ ಶಬ್ದ ಕೇಳಿಬಂದಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮೂರು ದಿನಗಳಿಂದ ಅನ್ನ, ನೀರಿಲ್ಲದೆ ಮನೆಯೊಳಗೆ ಸಿಲುಕಿದ್ದ ಸೀಮಾ ತೀವ್ರವಾಗಿ ಬಳಲಿದ್ದರು ಎನ್ನಲಾಗಿದೆ.
ಮನೆಯ ಹಾಲ್ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಬಾತ್ರೂಮ್ನಲ್ಲಿ ಸೋಹಮ್ ದಾಸ್ನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಆರೋಪಿ ಸುದೀಪ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.







