ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಮನೆಯಿಂದ ತರಿಸಿಕೊಂಡ ಬ್ಲಾಂಕೆಟ್ ಸಿಗದಿರುವ ಸಾಧ್ಯತೆ ಹೆಚ್ಚಾಗಿದೆ. ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದ ಬ್ಲಾಂಕೆಟ್ ಪಡೆಯಲು ಕೋರ್ಟ್ ಅನುಮತಿ ಪಡೆದಿದ್ದ ದರ್ಶನ್ಗೆ ಇದೀಗ ಜೈಲು ನಿಯಮಗಳೇ ಅಡ್ಡಿಯಾಗಿವೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಸಮಾನವಾಗಿ ಒಂದೇ ರೀತಿಯ ಬ್ಲಾಂಕೆಟ್ ವಿತರಿಸುವಂತೆ ಆದೇಶ ಹೊರಡಿಸಲು ಮುಂದಾಗಿದ್ದಾರೆ. ಚಳಿಗಾಲ ಹಾಗೂ ಮಳೆಗಾಲ ಎರಡಕ್ಕೂ ಹೊಂದುವ ಬ್ಲಾಂಕೆಟ್ಗಳನ್ನು ಜೈಲು ವತಿಯಿಂದಲೇ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಕ್ರಮ ಜಾರಿಯಾದರೆ ವೈಯಕ್ತಿಕವಾಗಿ ಮನೆಯಿಂದ ಬ್ಲಾಂಕೆಟ್ ಬಳಸುವ ಅವಕಾಶ ಕೈದಿಗಳಿಗೆ ಇರುವುದಿಲ್ಲ.
ಇನ್ನೊಂದೆಡೆ, ದರ್ಶನ್ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರ ಗೌಡ ಅವರಿಗೆ ನೀಡಲಾಗಿದ್ದ ಮನೆ ಊಟದ ಅನುಮತಿಯನ್ನು ಹಿಂಪಡೆಯಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ಮನೆ ಊಟಕ್ಕೆ ಅವಕಾಶ ನೀಡಿದರೆ, ಪರಪ್ಪನ ಅಗ್ರಹಾರ ಜೈಲಿನ ಸಾವಿರಾರು ಆರೋಪಿಗಳು ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.
ಮನೆ ಊಟವನ್ನು ಜೈಲಿನೊಳಗೆ ನೀಡಲು ಪ್ರತ್ಯೇಕ ಪರಿಶೀಲನಾ ವ್ಯವಸ್ಥೆ ಹಾಗೂ ಸಿಬ್ಬಂದಿ ಅಗತ್ಯವಿದ್ದು, ಇದು ಆಡಳಿತಾತ್ಮಕ ತೊಂದರೆ ಉಂಟುಮಾಡಲಿದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ.
ಪವಿತ್ರ ಗೌಡ ಅವರು ಜೈಲಿನ ಆಹಾರದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದ್ದರು. ಅವರೊಂದಿಗೆ ನಾಗರಾಜು ಮತ್ತು ಲಕ್ಷ್ಮಣ್ ಕೂಡ ಮನೆ ಊಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ದಿನಕ್ಕೆ ಒಂದು ಬಾರಿ ಮನೆ ಊಟ ನೀಡಲು ಅನುಮತಿ ನೀಡಿದ್ದರೂ, ಇದೀಗ ಜೈಲು ಇಲಾಖೆ ಈ ಆದೇಶವನ್ನು ಪ್ರಶ್ನಿಸಲು ಮುಂದಾಗಿದೆ.



