ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಣವೇ ಶಕ್ತಿ ಎಂಬ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶೃದ್ಧೆ, ಏಕಾಗ್ರತೆ ರೂಢಿಸಿಕೊಂಡು ಸತತಾಭ್ಯಾಸದ ಮೂಲಕ ಉನ್ನತ ಗುರಿ ಸಾಧಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ ಹೇಳಿದರು
ಅವರು ಶನಿವಾರ ಪಟ್ಟಣದ ಬಾಲಾಜಿ ಹಾಸ್ಪಿಟಲ್ನಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿರುವ ಉಚಿತ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಗುರುಗಳು ಹೇಳಿದ ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಬೇಕು, ಅದರ ಪ್ರಕಾರ ಜೀವನ ನಡೆಸಬೇಕು. ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ವಿದ್ಯೆದಲ್ಲಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕುವತ್ತ ಚಿತ್ತ ಹರಿಸಬೇಕು. ಅಂಬೇಡ್ಕರ್ ಅವರು ಬದುಕಿನುದ್ದಕ್ಕೂ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅವರ ಪ್ರೇರಣೆಯಿಂದ ನಾವೆಲ್ಲ ಬೆಳೆಯಬೇಕಿದೆ. ವಿದ್ಯಾರ್ಥಿಗಳು ಇವತ್ತಿನ ಎಲ್ಲ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು.
ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಿಲು ಏಕಾಗ್ರತೆಯಿಂದ ಶ್ರಮಿಸಬೇಕು. ನಮ್ಮ ಭವಿಷ್ಯದ ರೂಪಾರಿಗಳು ನಾವೇ ಆದ್ದರಿಂದ ಉನ್ನತ, ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂದುಕೊಂಡ ಗುರಿ ಸಾದಿಸಲು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭ್ಯಾಸದೊಂದಿಗೆ ಶಿಸ್ತುಬದ್ಧ ನಾಗರಿಕರನ್ನಾಗಿ ರೂಪಿಸಬೇಕೆಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಹುಬ್ಬಳ್ಳಿಯ ಡಾ. ಕ್ರಾಂತಿಕಿರಣ, ಸಂಘ ಪರಿವಾರದ ವಾದಿರಾಜ, ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಬಿಜೆಪಿ ಮುಖಂಡ ನಾಗರಾಜ ಕುಲಕರ್ಣಿ, ಸೋಮೇಶ ಉಪನಾಳ ಸೇರಿ ಅನೇಕರಿದ್ದರು.



