ತುಮಕೂರು: ಗ್ರಾಮೀಣ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.
ಬಸ್‌ಗಳ ಮುಂದೆ ಅಡ್ಡಲಾಗಿ ಮಲಗಿ ಬಸ್ ಸಂಚಾರವನ್ನು ತಡೆದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೇ ನಿತ್ಯ ಪರದಾಡುತ್ತಿರುವ ವಿದ್ಯಾರ್ಥಿಗಳು, ಗ್ರಾಮೀಣ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ಬಸ್ ನಿಲ್ದಾಣದೊಳಗೆ ಬಸ್‌ಗಳ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.
ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ-ಪಟಾಟ ಮತ್ತು ವಾಗ್ವಾದ ನಡೆದಿದ್ದು, ಕೆಲಕಾಲ ಬಸ್ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಕೊರಟಗೆರೆ, ಪಾವಗಡ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ತುಮಕೂರು ನಗರದ ಕಾಲೇಜುಗಳಿಗೆ ಸಂಚರಿಸುತ್ತಿದ್ದಾರೆ. ಈ ಮಾರ್ಗಗಳಲ್ಲಿ ಬಸ್‌ಗಳ ಕೊರತೆಯಿಂದ ಸಮಯಕ್ಕೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.



