ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನಡುರಾತ್ರಿಯ ಸಮಯದಲ್ಲಿ ನಡೆದಿತ್ತು ಒಂದು ಅಂತ್ಯ ಸಂಸ್ಕಾರದ ಮೆರವಣಿಗೆ. ಸಂಬಂಧಿಗಳು, ಬಂಧು ಬಳಗದವರು ಸೇರಿದಂತೆ ಹೆಣದ ಸುತ್ತಲೂ ಕುಳಿತು ಬಾಯಿ ಬಡಿದುಕೊಂಡು ಸತ್ತವನ ಗುಣಗಾನ ಮಾಡುತ್ತ, ಆಕ್ರಂದನ ಮುಗಿಲು ಮುಟ್ಟಿತ್ತು. ಊರು ತುಂಬಾ ತಮಟೆ ನಿನಾದ, ಅದರೊಂದಿಗೆ ಪಟಾಕಿಗಳ ಸದ್ದು!
ಗಾಢ ನಿದ್ರೆಯಲ್ಲಿದ್ದವರು ಎದ್ದು ಕುಳಿತು ತಮ್ಮ ಹಾಸಿಗೆಯಲ್ಲಿಯೇ ಲಬೋ ಲಬೋ ಎಂದು ಹೊಯ್ಕೊಂಡರು. ಪಕ್ಕದ ಊರಿನವರು ಬಂದು ಹಾದಿ ಬೀದಿಯಲ್ಲಿಯೇ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಮುಂದೆ ತಂಡೋಪತಂಡವಾಗಿ ಮಕ್ಕಳು, ಯುವಕರು ಹೊಯ್ಕೊಳ್ಳುತ್ತಾ ಸಾಗಿದ್ದರು. ಅಲ್ಲಲ್ಲಿ ಜನಜಂಗಳಿ ಕೂಡಿದ್ದ ಸ್ಥಳದಲ್ಲಿ ಮೆರವಣಿಗೆ ಕ್ಷಣ ಹೊತ್ತು ನಿಲ್ಲಿಸಿ ಹೆಂಡತಿ, ಅಕ್ಕ, ತಂಗಿ, ಸೊಸೆಯಂದಿರು ಸ್ವಲ್ಪು ದೂರದಿಂದ ಓಡೋಡಿ ಬಂದು ಶವವನ್ನು ಅಪ್ಪಿಕೊಂಡು ಬೋರಾಡಿ ಅತ್ತು ಕರೆದರು.
ಹೀಗಾಗಬಾರದಿತ್ತು ಎಂದು ಕೆಲ ಜನರು ಆಡುತ್ತಿದ್ದ ಮಾತು ಮನಕಲುಕುವಂತಿದ್ದರೂ, ನಗೆಯ ಹೊನಲೇ ಅಲ್ಲಿ ಹರಿದಿತ್ತು. ಈ ಸನ್ನಿವೇಶ ನೋಡಿದವರೆಲ್ಲರೂ ಗಹಗಹಿಸಿ ನಗುತ್ತಿದ್ದರು. ನೀವಂದುಕೊಂಡಂತೆ ಇದು ನಿಜವಾದ ಶವ ಯಾತ್ರೆಯಲ್ಲ, ಇದು ಅಣುಕು ಶವಯಾತ್ರೆ. ರವಿವಾರ ಹೋಳಿ ಹುಣ್ಣಿಮೆಯ ಹಿಂದಿನ ಮಧ್ಯರಾತ್ರಿ ವೇಳೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಹೋಬಳಿ ಜಕ್ಕಲಿ ಗ್ರಾಮದ ಕೆಲ ಓಣಿಗಳಲ್ಲಿ ವರ್ಷಕ್ಕೊಂದು ದಿನ ಮೋಜಿಗಾಗಿ ಸೃಷ್ಟಿಸಿದ ಸನ್ನಿವೇಶಗಳು ಇವು. ಅವತ್ತು ರಾತ್ರಿ ಕಾಮದಹನ ನಡೆಯುತ್ತದೆಂಬುದು ಬಹಳ ಜನರಿಗೆ ತಿಳಿದೇ ಇತ್ತು. ಸಂಜೆಯಿಂದ ನಸುಕಿನವರೆಗೆ ಕೆಲ ಜನ ಕಟ್ಟಿಗೆ ಕಾಯಲು ಕುಳಿತಿದ್ದರು, ಹಲವು ಜನ ತಮ್ಮ ಆಸ್ತಿಪಾಸ್ತಿ ಕಾಯುತ್ತಿದ್ದರು.
ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹೋಳಿ ಹಬ್ಬಕ್ಕೆ ಹಿಂದಿನಿಂದಲೂ ವಿಶೇಷ ಮಹತ್ವ ಇದೆ. ಈ ಹಿನ್ನೆಲೆಯಲ್ಲಿ ಚಿತ್ರ, ವಿಚಿತ್ರ, ನಂಬಿಕೆ ಇಟ್ಟುಕೊಂಡು, ರಾಜ್ಯಾದ್ಯಂತ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುವ ಈ ಹಬ್ಬವನ್ನು ಜಕ್ಕಲಿ ಗ್ರಾಮದಲ್ಲಿ ಆಚರಿಸಿದ್ದು ಹೀಗೆ.
ಇವರ ಹಾಸ್ಯಮಯ ಪ್ರಹಸನ ನೋಡಲೆಂದು ಸುತ್ತ ಮುತ್ತಲಿನ ಹಳ್ಳಿಗಳಿಂದ ಜನ ಸೇರಿದ್ದರು. ಗ್ರಾಮ ಸಹಾಯಕನಾದ ಶರಣಪ್ಪ ತಳವಾರ ಹುಬ್ಬಾ ನಕ್ಷತ್ರದಲ್ಲಿ ಅಗ್ನಿ ಸ್ಪರ್ಶ ಮಾಡಿದರು. ಬಳಿಕ ನಸುಕಿನ ವೇಳೆ ಊರಿನ ಪ್ರತಿ ಕುಟುಂಬದವರು ಬಂದು ಅಲ್ಲಿ ಸುಟ್ಟ ಕೆಂಡವನ್ನು ಮನೆಗೆ ತಂದು ಮನೆಯ ಬಾಗಿಲ ಬಳಿ ಹಾಕಿ ಈ ವರುಷದಲ್ಲಿ ಬೆಳೆದ ಕಡಲೆಯನ್ನು ಸುಟ್ಟುಕೊಂಡು ತಿಂದರು.
ಈ ವೇಳೆ ತಂಡದಲ್ಲಿ ಶೇಖಪ್ಪ ಮಾರನಬಸರಿ, ಮಲ್ಲಪ್ಪ ಪಲ್ಲೇದ, ಪ್ರಕಾಶ ವಾಲಿ, ವೀರೇಶ ಹಿರೇಮಠ, ಮಹಾಂತೇಶ ಇಟಗಿ, ಸಂಗಮೇಶ ಮೆಣಸಗಿ, ಶರಣಪ್ಪ ಕೋರಿ, ಸಿದ್ದಲಿಂಗಪ್ಪ ಕುರಡಗಿ, ಮಂಜು ಜಂಗಣ್ಣವರ, ವಿಶ್ವನಾಥ ಹೊಸಮನಿ, ಮಂಜು ಶಿವಶಿಂಪರ, ಶರಣಪ್ಪ ನಾಲ್ವಾಡ, ಪ್ರವೀಣ ವಾಲಿ, ಪರಸಪ್ಪ ಜಂಗಣ್ಣವರ, ಉಮೇಶ ನರೇಗಲ್ಲ, ವಿನಾಯಕ ಅಥಣಿ, ನಾಗರಾಜ ಕಡಗದ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಹೀಗೆ ಸುಟ್ಟ ಕಡಲೆಯನ್ನು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ, ಹಲ್ಲುಗಳು ಬೇಗನೇ ಬಿದ್ದು ಹೋಗುವುದಿಲ್ಲ ಎನ್ನುವುದು ಜನರ ನಂಬಿಕೆ. ಬೆಂಕಿ ಆರಿದ ಮೇಲೆ ಬೂದಿಯನ್ನು ಆಯ್ದು ಬಿತ್ತನೆಯ ಬೀಜಗಳಿಗೆ ಸವರುತ್ತಾರೆ, ಕಾಮನ ಬೂದಿಯ ಸ್ಪರ್ಶದಿಂದ ಭೂಮಿಯ ಫಲವತ್ತೆ ಹೆಚ್ಚಿದರೆ, ರಂಜಕ ಉಳಿದು ಬಿತ್ತಿದ ಬೀಜಗಳು ಹುಸಿ ಹೋಗುವುದಿಲ್ಲ ಎಂಬುದು ರೈತಾಪಿ ಜನರ ಅಚಲ ನಂಬಿಕೆ
– ಶಿವನಾಗಪ್ಪ ದೊಡ್ಡಮೇಟಿ.
ರೈತ ಮುಖಂಡರು.
ಗ್ರಾಮೀಣ ಸೊಗಡಿನ ಈ ಕಲೆಯ ಉಳಿವಿಗಾಗಿ ಸುಮಾರು 36 ವರ್ಷಗಳಿಂದ ಪಲ್ಲೇದವರ ಓಣಿಯ ಹಾಸ್ಯ ಕಲಾವಿದರಾದ ಪ್ರಕಾಶ ಹೊಸಮನಿ, ಅಂದಪ್ಪ ಜಂಗಣ್ಣವರ, ಹೆಣ್ಣಿನ ಧ್ವನಿ ಆಕರಣೆ ಮಾಡಿ ತಮ್ಮ ಹಾಸ್ಯದ ಮೂಲಕ ಜನಮನ ಸೆಳೆದರು. ಕಾಮಣ್ಣನಾಗಿ ಆದಾಮಸಾಬ ಬಾಲೇಸಾಬನವರ ಪಾತ್ರ ನಿರ್ವಹಿಸಿದರು.