ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬು ಬೆಲೆ ನಿಗದಿ ವಿಚಾರದ ಚರ್ಚೆ ನಡೆಯುತ್ತದೆ. ಮಹಾರಾಷ್ಟ್ರದಲ್ಲಿನ ಬೆಲೆ ಕೊಡಿ ಅಂತಿದ್ದಾರೆ.
ಆದರೆ ಮಹಾರಾಷ್ಟ್ರದ ರಿಕವರಿ ಪರ್ ಟನ್ ಜಾಸ್ತಿ ಇದೆ. ಅದಕ್ಕಾಗಿ ಅಲ್ಲಿ ಬೆಲೆ ಜಾಸ್ತಿ ಕೊಡುತ್ತಾರೆ. ನಮ್ಮಲ್ಲಿ ರಿಕವರಿ ಪರ್ ಟನ್ ಕಡಿಮೆ ಇದೆ. ಹಾಗಾಗಿ ಸಚಿವರೆಲ್ಲರೂ ಮಾತನಾಡಿದ್ದಾರೆ. ನಿನ್ನೆ ಚರ್ಚೆ ಮಾಡಿದರು, ಅದು ವಿಫಲವಾಗಿದೆ. ಇವತ್ತು ಕ್ಯಾಬಿನೆಟ್ ಮುಂದೆ ಬರುವ ಸಾಧ್ಯತೆ ಇದೆ.
ರೈತರ ಬಳಿ ಸಂಯಮದಿಂದ ವರ್ತಿಸಬೇಕು ಎಂದು ನಾನು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಯಾಕೆಂದರೆ ಹಿಂದೆ ಬೆಳಗಾವಿಯಲ್ಲಿ ಏನಾಯಿತು ಎಂದು ಗೊತ್ತಿದೆ. ಹಿಂದೆ ರೈತರೊಬ್ಬರು ವಿಷ ತೆಗೆದುಕೊಂಡಿದ್ದರು. ಹಾಗಾಗಿ, ಇದರ ಬಗ್ಗೆ ಕುಳಿತು ಚರ್ಚೆ ಮಾಡಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.


