ಬೆಂಗಳೂರು: ರಾಜ್ಯ ಸರ್ಕಾರ 2025-26ನೇ ಹಂಗಾಮಿನಲ್ಲಿ ಕಬ್ಬು ಬೆಲೆಯನ್ನು ಪ್ರತಿ ಟನ್ ₹3,300ಗೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ನಡುವೆ ಸಭೆ ನಡೆದಿತ್ತು.
ಸಭೆಯಲ್ಲಿ ರೈತರಿಗೆ ಹೆಚ್ಚುವರಿ ₹100 ನೀಡುವಂತೆ ನಿರ್ಣಯಗೊಂಡಿತ್ತು. ಇದರಂತೆ, ₹50 ಕಾರ್ಖಾನೆಗಳು ಮತ್ತು ₹50 ರಾಜ್ಯ ಸರ್ಕಾರ ನೀಡುವಂತೆ ಆದೇಶ ನೀಡಿದೆ. ಈ ತೀರ್ಮಾನದಿಂದ ರಾಜ್ಯದ ಕಬ್ಬು ರೈತರಿಗೆ ಆರ್ಥಿಕ ಪರಿಹಾರ ಹಾಗೂ ಪ್ರೋತ್ಸಾಹ ದೊರೆಯಲಿದೆ.
ಆದೇಶದಂತೆ 9.5% ಅಥವಾ ಕಡಿಮೆ ರಿಕವರಿ ದರ ಕಬ್ಬಿಗೆ ಪ್ರತಿ ಟನ್ಗೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಎಫ್ಆರ್ಪಿ ದರದ ಅನ್ವಯ ರೈತರಿಗೆ ನೀಡಲು ಒಪ್ಪಿರುವ ಮೊತ್ತದ ಮೇಲೆ ಸಕ್ಕರೆ ಕಾರ್ಖಾನೆ ವತಿಯಿಂದ 50 ರೂ. ಮತ್ತು ರಾಜ್ಯ ಸರ್ಕಾರದ ವತಿಯಿಂದ 50 ರೂ. ಸೇರಿ ಹೆಚ್ಚುವರಿ 100 ರೂ. ನೀಡಲಾಗುವುದು.
ಅದೇ ರೀತಿ 10.25% ರಿಕವರಿ ದರಕ್ಕೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 3,100 ರೂ. ನೀಡಲು ಒಪ್ಪಿದೆ. ಅದರ ಮೇಲೆ ಹೆಚ್ಚುವರಿ 100 ರೂ. ಸೇರಿಸಿ ಪ್ರತಿ ಟನ್ 3,200 ರೂ. ನಿಗದಿಪಡಿಸಿ ಆದೇಶಿಸಲಾಗಿದೆ. ಇನ್ನು 11.25% ರಿಕವರಿ ದರಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತು ಪಡಿಸಿ ಪ್ರತಿ ಟನ್ ಕಬ್ಬಿಗೆ 3,200 ರೂ. ನೀಡಲು ಸರ್ಕಾರ ಒಪ್ಪಿದೆ. ಅದರ ಮೇಲೆ ಹೆಚ್ಚುವರಿ 100 ರೂ. ಸೇರಿಸಿ ಪ್ರತಿ ಟನ್ಗೆ 3,300 ರೂ. ನಿಗದಿಗೊಳಿಸಿ ಆದೇಶಿಸಲಾಗಿದೆ.


