ವಿಜಯಸಾಕ್ಷಿ ಸುದ್ದಿ, ಗದಗ : ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು.
ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಗಣಪತಿ ಪಾಲನಕರ ಅವರ ನಿವಾಸದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ದೈವಜ್ಞ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 3 ವರ್ಷದೊಳಗೆ ಶ್ರೀಮಂತರ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ ವರ್ಷವಿಡೀ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ಖರ್ಚು ಮಾಡಿದರೆ, ರಾಜ್ಯ ದಿವಾಳಿಯಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ದೈವಜ್ಞ ಸಮಾಜದ ಮುಖಂಡರಾದ ಅರವಿಂದ ಪಾಲನಕರ, ಗಣಪತಿ ಪಾಲನಕರ, ಪ್ರಮೋದ ರಾಯ್ಕರ್, ಸಂತೋಷ ಕುಡರ‍್ಕರ, ಪ್ರಕಾಶ ರಾಯ್ಕರ್, ಮಹಿಳಾ ಮಂಡಳ ಸದಸ್ಯರು, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ ಸೇರಿ ಹಲವರಿದ್ದರು.


