ಬೆಳಗಾವಿ: ಕಬ್ಬು ಬೆಳಗಾರರ ಕಿಚ್ಚು ಇದೀಗ ಇಡೀ ಉತ್ತರ ಕರ್ನಾಟಕಕ್ಕೆ ವ್ಯಾಪಿಸಿದ್ದು ಧಗಧಗಿಸ್ತಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರದಲ್ಲಿ ಅಹೋರಾತ್ರಿ ಧರಣಿ ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡಿ ರೈತರು ಕಿಚ್ಚು ಹೊರಹಾಕ್ತಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಪಟ್ಟಣ ಸಂಪೂರ್ಣ ಬಂದ್ ಆಗಿದ್ದು,
ಅಂಗಡಿ ಮುಂಗಟ್ಟುಗಳನ್ನ ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ವರ್ತಕರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಅಂಕಲಗಿ ಪಟ್ಟಣದ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಹೀಗಾಗಿ ಜನ ಸಂಚಾರವಿಲ್ಲದೆ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿತ್ತು.


