ಬೆಳಗಾವಿ: ಬೆಳಗಾವಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ರಾಜಕೀಯ ಒತ್ತಡಕ್ಕೆ ಮಣಿದು ತಮ್ಮನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಸೆಲ್ಫೀ ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ ಕಣ್ಣೀರಿಡುತ್ತಾ ಮಾತನಾಡಿದ ಶಿಕ್ಷಕಿ, ತನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆನೆಂದು ಹೇಳಿಕೊಂಡಿದ್ದಾರೆ.
ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ್ ಅವರು ಈ ಆರೋಪ ಮಾಡಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರವಾಗಿ ಚುನಾವಣೆ ನಡೆಸಲು ಪವನ್ ಪಾಟೀಲ್ ಎಂಬವರು ಯತ್ನಿಸಿದ್ದರು ಎಂದು ಅವರು ದೂರಿದ್ದಾರೆ. ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಗಮನಿಸಿ, ಸಂಬಂಧಿಸಿದ ದಿನ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರಮದಿಂದ ಅಸಮಾಧಾನಗೊಂಡ ಪವನ್ ಪಾಟೀಲ್ ಹಾಗೂ ಅವರ ಬೆಂಬಲಿಗರು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಒತ್ತಡ ತಂದಿದ್ದಾರೆ ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಬಳಸಿ ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ರಾಜಕೀಯ ಒತ್ತಡಕ್ಕೆ ಮಣಿದು, ಯಾವುದೇ ಸ್ಪಷ್ಟ ತಪ್ಪು ಇಲ್ಲದಿದ್ದರೂ ಬಿಇಒ ಪ್ರಭಾವತಿ ಪಾಟೀಲ್ ಅವರು ತಮ್ಮನ್ನು ಅಮಾನತು ಮಾಡಿದ್ದಾರೆ ಎಂದು ಸುರೇಖಾ ಬಾಯಣ್ಣವರ್ ಆರೋಪಿಸಿದ್ದಾರೆ. ಈ ಘಟನೆ ಶಿಕ್ಷಣ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



