ವಿಜಯಸಾಕ್ಷಿ ಸುದ್ದಿ, ಗದಗ : ಪಾಶ್ಚಿಮಾತ್ಯ ರಾಷ್ಟçಗಳಿಗೆ ಭಾರತದ ಆಧ್ಯಾತ್ಮಿಕ ಶಕ್ತಿ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ವಿಶ್ವ ವಿಖ್ಯಾತ ಶಿಕಾಗೊ ಭಾಷಣ ಮಾಡಿದ ದಿನವಾದ ಸೆಪ್ಟೆಂಬರ್ 11ರಂದು ಜಿಲ್ಲೆಯ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ನಾಗಾವಿಯ ಕ್ಯಾಂಪಸ್‌ನಲ್ಲಿ ವಿಶ್ವಚೇತನ ಸ್ವಾಮಿ ವಿವೇಕಾನಂದರ 39.5 ಅಡಿ ಎತ್ತರದ ಪುತ್ಥಳಿ ಅನಾವರಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ ತಿಳಿಸಿದರು.
ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸಭವನದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ನೇಹ-ಸಹೋದರತ್ವ ಭಾವನೆಯ ಪ್ರತೀಕವಾಗಿ ವಿಶ್ವದ ಗಮನವನ್ನು ಸೆಳೆದ ಮಹಾನ್ ಚೇತನ, ಭಾರತೀಯ ಚಿಂತನ ಶೈಲಿಯ ಮಹತ್ವವನ್ನು ವಿಶ್ವ ಮಾನ್ಯಗೊಳಿಸಿದವರು ಸ್ವಾಮಿ ವಿವೇಕಾನಂದರು. ಇಂತಹ ಆದರ್ಶ ವ್ಯಕ್ತಿತ್ವದ ಪ್ರತಿಕೃತಿಯನ್ನು ಸ್ಥಾಪಿಸುವುದರ ಮೂಲಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಅವರ ವಿಚಾರಧಾರೆಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ಮಾಡುವುದು, ಕರ್ನಾಟಕ ಹಾಗೂ ದೇಶದಲ್ಲಿ ವಿವೇಕಾನಂದರ ಪ್ರಸ್ತುತಿಯನ್ನು ಪ್ರಚುರಪಡಿಸಲು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭವ್ಯವಾದ ಕಂಚಿನ ಪುತ್ಥಳಿಯನ್ನು ಕಲ್ಕತ್ತಾದ ಸ್ವಾಮಿ ವಿವೇಕಾನಂದ ರಾಮಕೃ಼಼ಷ್ಣ ಮಿಷನ್‌ರವರು ಒದಗಿಸಿದ್ದಾರೆ. ಈ ಪುತ್ಥಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ್, ಗದಗಿನ ವಿವೇಕಾನಂದ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಇವರುಗಳ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಅನಾವರಣ ಸಮಾರಂಭವನ್ನು ಸೆಪ್ಟೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಸಮಾರಂಭಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ, ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರಗಳ ಮತ್ತು ಶಾಸನ ಮತ್ತು ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ. ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿನಾನಂದಜೀ, ತೋಂಟದಾರ್ಯ ಮಠದ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿ, ಗದಗನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮಿಯವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಜೆ.ಸಿ. ಪ್ರಶಾಚಿತ, ಉಮೇಶ ಬಾರ್ಕಿ, ಶಶಿಭೂಷಣ, ಡಾ. ಅಬ್ದುಲ್ಲ, ಗಿರೀಶ ದೀಕ್ಷಿತ್, ಪ್ರಶಾಂತ ಮೆಹರವಾಡೆ ಇದ್ದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಖಾದಿ ಮಳಿಗೆ ಹಾಗೂ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧಿಯವರ ಕುರಿತಾದ ಪುಸ್ತಕಗಳು ಹಾಗೂ ವಿಶ್ವವಿದ್ಯಾಲಯದ ಇತರ ಪ್ರಕಟಣೆಗಳ ಪ್ರಚಾರ ಹಾಗೂ ಮಾರಾಟ ಮಳಿಗೆಗಳನ್ನು, ವಿಶ್ವ ವಿದ್ಯಾಲಯದ ಸ್ಪೋರ್ಟ್ಸ್ ಮತ್ತು ವ್ಯಾಯಾಮ ಶಾಲೆ ಕಟ್ಟಡದ ಉದ್ಘಾಟನೆಯನ್ನು ಸಹ ನೆರವೇರಿಸಲಾಗುವುದು ಎಂದು ಕುಲಸಚಿವರಾದ ಪ್ರೊ. ಡಾ.ಸುರೇಶ ವಿ.ನಾಡಗೌಡರ ತಿಳಿಸಿದರು.