For Dai;y Updates Join Our whatsapp Group
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಮೆಳೆಕೋಟೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸೈಟ್ ತೆಗೆದುಕೊಳ್ಳಲು ಹಣ ಸಹಾಯ ಮಾಡ್ತೀನಿ ಎಂದು ಸ್ವಾಮೀಜಿಯೊಬ್ಬರು ಮಹಿಳೆಯನ್ನ ಮಂಚಕ್ಕೆ ಕರೆದಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ಬ್ರಹ್ಮಾನಂದಗುರೂಜಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.
ಸ್ವಾಮೀಜಿ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವ ಭರವಸೆ ನೀಡಿದ್ದರು. 13 ಲಕ್ಷ ರೂ. ಮೌಲ್ಯದ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ.
ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಆಗಿ ಮತ್ತೊಬ್ಬರಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಸೈಟ್ ನೀಡದೆ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನೂ ಆಡಿಯೋ, ವಿಡಿಯೋ ಡಿಲೀಟ್ ಮಾಡಿದರೆ 50 ಸಾವಿರ ರೂ. ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ನಾನು ಒಬ್ಬಂಟಿಯಾಗಿದ್ದಾಗ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಪೊಲೀಸ್ ಠಾಣೆಗೆ ಆಡಿಯೋ, ವಿಡಿಯೋ ಸಮೇತ ದೂರು ನೀಡಿದ್ರೂ ನ್ಯಾಯ ಸಿಗ್ತಿಲ್ಲ. ನನಗೆ ಕಾಟ ಕೊಟ್ಟು ಈಗ ನನ್ನ ವಿರುದ್ಧವೇ ಬ್ರಹ್ಮಾನಂದಗುರೂಜಿ ಮತ್ತು ಆತನ ಪತ್ನಿಯಿಂದ ನಿಂದನೆ ಆರೋಪ ಮಾಡಿದ್ದಾರೆ ಎಂದು ಮಹಿಳೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಬ್ರಹ್ಮಾನಂದ ಗುರೂಜಿ ಮೆಳೆಕೋಟೆ ಬಳಿ ಸರ್ಕಾರದ ಆರ್ಥಿಕ ನೆರವಿನಿಂದ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠ ಆಶ್ರಮವನ್ನು ಸ್ಥಾಪಿಸಿರುವುದು ಕೂಡ ಬಯಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸಬೇಕಿದ್ದು, ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಿದೆ.