ವಿಜಯಸಾಕ್ಷಿ ಸುದ್ದಿ, ಧಾರವಾಡ : ಪತ್ರಕರ್ತರು ಸಮಾಜ ಪರಿವರ್ತನೆಗೆ ಮುಂದಾಗಬೇಕು. ಸಮಾಜ ಸೇವೆಗೆ ಪತ್ರಿಕಾರಂಗ ಅತ್ಯುತ್ತಮ ದಾರಿಯಾಗಿದೆ. ಪತ್ರಕರ್ತರು ವೃತ್ತಿ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮತ್ತು ಧಾರವಾಡ ಜರ್ನಲಿಸ್ಟ್ ಗಿಲ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆ-2024ರ ಅಂಗವಾಗಿ `ಸಾಮಾಜಿಕ ಮಾಧ್ಯಮದ ಪರಿಣಾಮಗಳು’ ಕುರಿತು ವಿಚಾರ ಸಂಕಿರಣ ಹಾಗೂ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಾಮಾಜಿಕ ಮಾಧ್ಯಮಗಳಿಂದ ಮುಖ್ಯ ವಾಹಿನಿಯ ಮಾಧ್ಯಮಗಳು ನಲುಗುತ್ತಿವೆ. ಸಾಮಾಜಿಕ ಮಾಧ್ಯಮಗಳು ಇಂದು ಜಗತ್ತಿನಾದ್ಯಂತ ದೊಡ್ಡ ಕ್ರಾಂತಿಯನ್ನುಂಟುಮಾಡುತ್ತಿವೆ. ಮಾನವೀಯ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಬರೆಯುವವನು ನಿಜವಾದ ಪತ್ರಕರ್ತ. ಜನಪರ ಕಾಳಜಿ ಹೊಂದಿದ ಪತ್ರಕರ್ತನಿಗೆ ಗೆಲುವು ದೊರೆಯುತ್ತದೆ. ಹೀಗಾಗಿ ಪತ್ರಿಕಾರಂಗವನ್ನು ಸಮಾಜದ ಕಾವಲು ನಾಯಿ ಎಂದು ಕರೆಯಲಾಗುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗುತ್ತಿವೆ. ಯುವ ಸಮೂಹ ಸಾಮಾಜಿಕ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಧಾರವಾಡ ಜರ್ನಲಿಸ್ಟ್ ಗಿಲ್ಡ್ನ ಅಧ್ಯಕ್ಷ ಡಾ.ಬಸವರಾಜ ಹೊಂಗಲ ಮಾತನಾಡಿ, ವರ್ಷಗಳು ಕಳೆದಂತೆ ಮಾಧ್ಯಮಗಳ ವರದಿಗಳು ಬದಲಾಗಬೇಕಿದೆ. ಸಾಮಾಜಿಕ ಮಾಧ್ಯಮವನ್ನು ಎಲ್ಲಿಯವರೆಗೆ ಸ್ವಾಗತ ಮಾಡುತ್ತೇವೆ ಎಂಬುದು ಗೊತ್ತಾಗುತ್ತಿಲ್ಲ. ಸಾಮಾಜಿಕ ಮಾಧ್ಯಮದಿಂದ ಸಮಾಜದ ಮೇಲೆ ದುಷ್ಪರಿಣಾಮಗಳು ಬೀರುತ್ತೀವೆ. ಸವಾಲುಗಳನ್ನು ಮೆಟ್ಟಿ ನಿಲ್ಲಲ್ಲು ಪತ್ರಕರ್ತರು ಸನ್ನದ್ಧರಾಗಬೇಕು. ಇಂದು ಸಮಾಜದಲ್ಲಿ ನಕಲಿ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಅವರ ಕಡಿವಾಣಕ್ಕೆ ಕಠಿಣ ಕಾನೂನುಗಳು ಜಾರಿಯಾಗಬೇಕಿವೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮೊಬೈಲ್ ಇದ್ದರೆ ಸಾಕು ಎಲ್ಲರೂ ಪತ್ರಕರ್ತರಂತೆ ವರ್ತಿಸುತ್ತಿದ್ದಾರೆ.
ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ವರದಿ ಪ್ರಕಟಿಸುವುದು ಮುಖ್ಯವಾಗಿದೆ. ಸಾಮಾಜಿಕ ಅಸ್ವಸ್ಥತೆಗೆ ಮೊಬೈಲ್ ಕಾರಣವಾಗಿದೆ. ಮೊಬೈಲ್‌ನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಆದಿತ್ಯ ಯಲಿಗಾರ, ಮಡಿವಾಳೆಪ್ಪ, ವಿನಾಯಕ ಹಾಗೂ ಮಾಳೇಶ ಸಾಮಾಜಿಕ ಮಾಧ್ಯಮದ ಕುರಿತಾಗಿ ಪ್ರಶ್ನೆಗಳನ್ನು ಕೇಳಿ, ಅತಿಥಿಗಳಿಂದ ಪ್ರತ್ಯುತ್ತರ ಪಡೆದುಕೊಂಡರು. ನೇತ್ರಾ ಎನ್.ವಿ. ವಚನ ಗೀತೆ ಪ್ರಸ್ತುತಪಡಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಸಂಜಯಕುಮಾರ ಮಾಲಗತ್ತಿ ವಂದಿಸಿದರು.