ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ತಡೆಗಟ್ಟುವಿಕೆ ಹಾಗೂ ಮಾನಸಿಕ ಆರೋಗ್ಯ ಕಾಳಜಿ ಕ್ರಮಗಳನ್ನು ಜಾರಿಗೆ ತರಲು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮ ಹಾಗೂ ಮಕ್ಕಳ ಸುರಕ್ಷತೆ ಖಚಿತಪಡಿಸುವುದು, ವಿದ್ಯಾರ್ಥಿಗಳ ಆರೋಗ್ಯ ವೃದ್ಧಿಗಾಗಿ ನಿರಂತರ ಸಮೀಕ್ಷೆ ಹಾಗೂ ಪರಿಶಿಲನೆ ನಡೆಸುವುದು ಸಮಿತಿಯ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳು ಕೆಲವೊಂದು ಸಂದಿಗ್ಧ ಸಂದರ್ಭಗಳಲ್ಲಿ ಪರಿಸ್ಥಿತಿ ಎದುರಿಸಲಾಗದೇ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಆತ್ಮಸ್ಥೆರ್ಯ ತುಂಬಲು ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯದ ಕುರಿತು ತರಬೇತಿ ಏರ್ಪಡಿಸಬೇಕು. ವಿದ್ಯಾರ್ಥಿಗಳ ಪಾಲಕರೂ ಸಹ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟೆಗಗಳನ್ನು ಮಾಡಬೇಕು. ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್‌ಪಿ ಮಹಾಂತೇಶ ಸಜ್ಜನರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಜಿಮ್ಸ್ನ ಮನೋರೋಗ ತಜ್ಞರು ಹಾಗೂ ಉಪವೈದ್ಯಕೀಯ ಅಧೀಕ್ಷಕರು ಡಾ. ಸೋಮಶೇಖರ ಬಿಜ್ಜಳ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಫೀಕಾ ಹಳ್ಳೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಎಲ್ಲ ಶಿಕ್ಷಣ ಸಂಸ್ಥೆಗಳು ವಿಶೇಷವಾಗಿ ತರಬೇತಿ ಸಂಸ್ಥೆಗಳು, ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಹಾಗೂ ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಗಳ ತ್ವರಿತ ಸೇವೆ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಟೆಲಿಮಾನಸ್ ಮತ್ತು ಇತರೆ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳ ಮಾಹಿತಿಯನ್ನು ಹಾಸ್ಟೆಲ್‌ಗಳು, ತರಗತಿ ಕೊಠಡಿಗಳು, ಸಾಮಾನ್ಯ ಸ್ಥಳಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.