ಈ ಶತಮಾನ ಜ್ಞಾನ, ಕೌಶಲದ ಯುಗ : ಎಸ್.ವ್ಹಿ. ಸಂಕನೂರ

0
Talent Award Program at Siddheshwar Mahavidyalaya Tonta
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಿಂದಿನ ಕಾಲದಲ್ಲಿ ಶ್ರೀಮಂತರಿಗೆ ಸಕಲ ಗೌರವಗಳೂ ಸಲ್ಲುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. 21ನೇ ಶತಮಾನದಲ್ಲಿ ಯಾರಲ್ಲಿ ಜ್ಞಾನ ಹಾಗೂ ಕೌಶಲ್ಯ ಇರುತ್ತದೆಯೋ ಅವರಿಗೆ ಗೌರವ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅಭಿಪ್ರಾಯಪಟ್ಟರು.

Advertisement

ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯಗಳಿಗನುಗುಣವಾಗಿ ಸ್ಥಾಪನೆಯಾದ ಈ ಪ.ಪೂ ಮಹಾವಿದ್ಯಾಲಯ ಕೆಲವೇ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ ಫಲಿತಾಂಶದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಇದಕ್ಕೆ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಎಸ್. ಪಟ್ಟಣಶೆಟ್ಟರ ದೂರದೃಷ್ಟಿ ಹಾಗೂ ಕಾಲೇಜು ಸಿಬ್ಬಂದಿಯವರ ಶ್ರಮ ಕಾರಣವಾಗಿದೆ. ಪಿಯುಸಿ ಪರೀಕ್ಷೆಯಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ಇತರೆ ವಿದ್ಯಾರ್ಥಿಗಳಲ್ಲೂ ಸಾಧನೆ ಮಾಡುವ ಸ್ಫೂರ್ತಿ ದೊರೆಯುತ್ತದೆ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳು ಕೇವಲ ಪಠ್ಯದ ಕಡೆ ಗಮನ ನೀಡದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, 15ನೇ ಶತಮಾನದಲ್ಲಿ ಬಸವತತ್ವವನ್ನು ಪುನರುತ್ಥಾಪಿಸಿದ ತೋಂಟದ ಸಿದ್ಧೇಶ್ವರ ಯತಿಗಳ ಹೆಸರಿನಲ್ಲಿ ಆರಂಭವಾದ ಈ ಮಹಾವಿದ್ಯಾಲಯ ಕೆಲವೇ ವರ್ಷಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಈ ಮೂರು ವಿಭಾಗಗಳಲ್ಲೂ ಉತ್ತಮ ಫಲಿತಾಂಶ ನೀಡುತ್ತಿದೆ. ಶಿಕ್ಷಣವು ಸ್ವಾವಲಂಬಿ ಬದುಕಿಗೆ ಆಧಾರವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿಯುವ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.

ಕನ್ನಡದ ಕುಲಗುರುಗಳೆಂದೇ ಖ್ಯಾತರಾಗಿದ್ದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯಗಳಿಗೆ ಅನುಗುಣವಾಗಿ ಈ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಶ್ರಮ ಅಭಿನಂದನೀಯ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕರಾದ ಡಾ.ಮಂಜುನಾಥ ಉತ್ತರಕರ ಮಾತನಾಡಿ, ನನ್ನ ವಿದ್ಯಾಗುರುಗಳಾದ ಎಸ್.ವಿ. ಸಂಕನೂರರು ಹಾಗೂ ನನ್ನ ಜೀವನ ರೂಪಿಸಿದ ಎಸ್.ಎಸ್. ಪಟ್ಟಣಶೆಟ್ಟರ ಗುರುಗಳ ಜೊತೆ ವೇದಿಕೆ ಹಂಚಿಕೊಂಡಿದ್ದು ಅವಿಸ್ಮರಣೀಯ ಕ್ಷಣವಾಗಿದೆ. ವಿದ್ಯಾರ್ಥಿಗಳು ತಾವು ಅಂದುಕೊಂಡ ಗುರಿ ಸಾಧನೆ ಅಸಾಧ್ಯ ಎಂದುಕೊಳ್ಳದೇ, ಎದುರಾಗುವ ಸೋಲುಗಳಿಗೆ ಎದೆಗುಂದದೇ ಮುನ್ನುಗ್ಗಬೇಕು ಎಂದರು.

ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯರಾದ ಡಾ.ಬಸವರಾಜ ಮಾಲೂರ ಅತಿಥಿಗಳಾಗಿ ಭಾಗವಹಿಸಿದ್ದರು. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ವಾಯ್.ಎಸ್. ಮತ್ತೂರ ಸರ್ವರನ್ನೂ ಸ್ವಾಗತಿಸಿದರು. ನಯನಾ ಅಳವಂಡಿ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಕುರಿತಾದ ಗೀತೆ ಹಾಡಿದಳು. ಇಚ್ಛಾ ಹಾಗೂ ಸಂಗಡಿಗರಿಂದ ವಚನ ನೃತ್ಯ ಜರುಗಿತು. ಸುಷ್ಮಿತಾ ಯಣಗಾಯಿ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ನೆರವೇರಿಸಿದರು. ವೇದಿಕೆ ಮೇಲೆ ಕಾಲೇಜು ಸಂಸತ್ ಪ್ರಧಾನ ಕಾರ್ಯದರ್ಶಿ ಸಂತೋಷ ಕೋಟೆಣ್ಣವರ, ಉಪ ಪ್ರಧಾನ ಕಾರ್ಯದರ್ಶಿ ನಗೀನಾ ನದಾಫ್ ಇದ್ದರು. ರೇಷ್ಮಾ ಎಚ್ ನಿರೂಪಿಸಿದರೆ, ಎಸ್.ಎಸ್. ಭಜಂತ್ರಿ ವಂದಿಸಿದರು.

ತೋಂ. ಸಿದ್ಧಲಿಂಗ ಮಹಾಸ್ವಾಮಿಗಳ ಪ್ರತಿಭಾ ಪುರಸ್ಕಾರ

ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಸೌಮ್ಯ ಕುರಡಗಿ, ರಾಧಿಕಾ ಭಜಂತ್ರಿ, ಮಧು ನಾಗರಾಳ ಮತ್ತು ವಿಜ್ಞಾನ ವಿಭಾಗದ ಚೇತನ ಬದಾಮಿ, ಸಾನಿಯಾ ಹುಡೇದ, ಪಲ್ಲವಿ ಆನಿ ಹಾಗೂ ಕಲಾ ವಿಭಾಗದ ಅಕ್ಷತಾ ಉಮಚಗಿ, ಭೀಮರಾಜ ಭಜಂತ್ರಿ, ಅಶ್ವಿನಿ ಗೌಡರ ಇವರಿಗೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರತಿಭಾ ಪುರಸ್ಕಾರ ನೀಡಿ ಸಂಮಾನಿಸಲಾಯಿತು.


Spread the love

LEAVE A REPLY

Please enter your comment!
Please enter your name here