ತ್ವರಿತಗತಿಯಲ್ಲಿ ಅರ್ಜಿಗಳ ವಿಲೇವಾರಿ : ವೈಶಾಲಿ ಎಂ.ಎಲ್.

0
Taluka level public meeting
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸರಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಿ, ಅವರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವದಕ್ಕಾಗಿ ಸಭೆಯನ್ನು ಆಯೋಜಿಸಲಾಗಿದ್ದು, ಇಲ್ಲಿ ಬಂದ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

Advertisement

ಅವರು ಬುಧವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಜರುಗಿದ ತಾಲೂಕಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ಇಂದಿನ ಸಭೆಯಲ್ಲಿ ಬಹುಪಾಲು ರೈತರ ಜಮೀನುಗಳಿಗೆ ತೆರಳುವ ರಸ್ತೆಗಳಿಗೆ ಸಂಬಂಧಿಸಿದ ಅರ್ಜಿಗಳೇ ಇದ್ದು, ಇವುಗಳನ್ನು ಆದಷ್ಟು ಬೇಗನೇ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಹಂತದಲ್ಲಿ ಸರಿಯಾಗಬಹುದಾದ ಸಮಸ್ಯೆಗಳಿಗೂ ಸಹ ಪರಿಹಾರ ಕಲ್ಪಿಸಲಾಗುವುದು. ಬೇರೆ ಇಲಾಖೆಗಳಿಗೆ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಿ ಅವುಗಳ ಇತ್ಯರ್ಥಕ್ಕೂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿಯ ಸಮಸ್ಯೆಗಳ ಕುರಿತು 57 ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತವಾದವು. ಪ್ರತ್ಯೇಕವಾಗಿ ಅರ್ಜಿದಾರರನ್ನು ಕರೆಯಿಸಿ ಅವರ ಸಮಸ್ಯೆಯನ್ನು ಸ್ವತಃ ಡಿಸಿ, ಎಸ್‌ಪಿ ಮತ್ತು ಸಿಇಓ ಆಲಿಸಿದರು. ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಅವರಿಂದ ಅರ್ಜಿದಾರರಿಗೆ ಉತ್ತರವನ್ನು ಕಲ್ಪಿಸಿದರು. ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ 20 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಾಸಾಶನದ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಂದಿನ ಸಭೆಯಲ್ಲಿ ಬಂದ ಅರ್ಜಿಗಳಲ್ಲಿ ಶೇ.70ಕ್ಕೂ ಹೆಚ್ಚು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದ್ದಾರೆ.

ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಆಶ್ರಯ ಮನೆ ನಿವೇಶನ ನೀಡುವ ಕುರಿತು ಹೊಸದಾಗಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸರಕಾರ ನಿರ್ದೆಶಿಸಿದ್ದು, ಅದರಂತೆ ತಹಸೀಲ್ದಾರ ನೇತೃತ್ವದಲ್ಲಿ ಸಮಿತಿ ರಚಿಸಿ, ಆದಷ್ಟು ಬೇಗನೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಹಸೀಲ್ದಾರ ಅನಿಲ ಬಡಿಗೇರ, ಸಿಪಿಐ ನಾಗರಾಜ ಮಾಢಳ್ಳಿ, ಇಓ ಕಲ್ಮನಿ, ಸಮಾಜಕಲ್ಯಾಣಾಧಿಕಾರಿ ಶರಣಯ್ಯ ಹಿರೇಮಠ, ಬಿಸಿಎಂನ ಮರಿಗೌಡ ಸುರಕೋಡ, ಟಿಎಚ್‌ಓ ಡಾ. ಸುಭಾಸ್ ದೈಗೊಂಡ, ಪಿಆರ್‌ಇಡಿ ಎಇಇ ರಾಠೋಡ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಬಿಇಓ ನಾಣ್ಕಿನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ಪ್ರಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಸಿಇಓ ಭರತ್ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಶೈಕ್ಷಣಿಕ ಗುಣಮಟ್ಟ ಪರೀಕ್ಷೆಗೆ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು. ನಂತರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಳವಡಿಸಲಾಗಿದ್ದ ಬಯೋಮೆಟ್ರಿಕ್ ಪರಿಶೀಲನೆ ನಡೆಸಿದರು.

 


Spread the love

LEAVE A REPLY

Please enter your comment!
Please enter your name here