ವಿಜಯಸಾಕ್ಷಿ ಸುದ್ದಿ, ಡಂಬಳ : ಪ್ರತಿ ಬಡ ಮಗುವೂ ಉತ್ತಮ ಆರೋಗ್ಯ ಹೊಂದಲು ಮೊಟ್ಟೆ, ರಾಗಿ ಮಾಲ್ಟ್, ಹಾಲು ವಿತರಿಸುವುದಲ್ಲದೆ, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಬಟ್ಟೆ, ಶೂ-ಸಾಕ್ಸ್ ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಗ್ರಾಮ ಪಂಚಾಯಿತಿ ಡಂಬಳ, ಅಕ್ಷರ ದಾಸೋಹ, ಶ್ರೀಅಜೀಂ ಪ್ರೇಮಜೀ ಫೌಂಡೇಶನ್ ಫಾರ್ ಡೆವಲಪ್‌ಮೆಂಟ್ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಪ್ರೋ ಸಂಸ್ಥೆಯ ಸಂಸ್ಥಾಪಕರಾದ ಅಜೀಂ ಪ್ರೇಮಜಿಯವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವಾ ಕಾರ್ಯ ಮಾಡಿದ್ದಾರೆ. ದೇಶಕ್ಕೆ ಅವರ ಕೊಡುಗೆ ಅಪಾರ. ಮೊದಲು ನಮ್ಮ ಸರಕಾರ ವಾರದಲ್ಲಿ 2 ದಿನ ಮೊಟ್ಟೆ ವಿತರಿಸುತಿತ್ತು. ಈಗ 6 ದಿನಗಳ ಕಾಲ ಈ ಕಾರ್ಯ ಜರುಗಲಿದೆ. ಮೊಟ್ಟೆ ತಿನ್ನದೆ ಇರುವ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ವಿತರಿಸುವ ಕಾರ್ಯ ನಡೆಯಲಿದೆ. ಮಕ್ಕಳು ಪೌಷ್ಟಿಕ ಆಹಾರ ಸೇವಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.
ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್. ಫಡ್ನೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಕರಿಯಪ್ಪ ಕರಿಗಾರ, ಶ್ರೀದೇವಿ ಹಿರೇಮಠ, ತಹಸೀಲ್ದಾರ ಎರಿಸ್ವಾಮಿ ಪಿ.ಎಸ್, ಇಒ ವಿಶ್ವನಾಥ ಹೊಸಮನಿ, ವಿ.ಬಿ. ಸೋಮನಕಟ್ಟಿಮಠ, ವಿ.ಎಸ್. ಯರಾಶಿ, ಬಸುರಾಜ ಪೂಜಾರ, ಬಸುರಡ್ಡಿ ಬಂಡಿಹಾಳ, ಹಾಲಪ್ಪ ಹರ್ತಿ, ಬಾಬುಸಾಬ ಮೂಲಿಮನಿ, ವಿರೂಪಾಕ್ಷಪ್ಪ ಲಕ್ಕುಂಡಿ, ಸೋಮಣ್ಣ ಗುಡ್ಡದ, ಮರಿಯಪ್ಪ ಸಿದ್ದಣ್ಣವರ, ಜಾಕೀರ ಮೂಲಿಮನಿ, ಮಹೇಶ ಗಡಗಿ, ಅಶೋಕ ಹಡಪದ, ಸಿದ್ದಪ್ಪ ಹಡಪದ, ಬಾಬುಸಾಬ ಸರಕಾವಾಸ, ಯಲ್ಲಪ್ಪಗೌಡ ಕರಮುಡಿ, ಹುಸೇನಸಾಬ ಹೊಸಬಾವಿ, ಅಕ್ಷರದಾಸೋಹ ಅಧಿಕಾರಿ ಎಸ್.ವಾಯ್. ವಿಭೂತಿ, ಗಂಗಾಧರ ಅಣ್ಣಿಗೇರಿ, ಸಿಆರ್‌ಪಿ ಮೃತುಂಜಯ್ಯ ಪೂಜಾರ, ಮುಖ್ಯೋಪಾಧ್ಯಾಯ ಬಾಪುಗೌಡ ಪಾಟೀಲ, ಕೆಜಿಬಿ ಮುಖ್ಯೋಪಾಧ್ಯಾಯ ಎಸ್.ಬಿ. ಅಬ್ಬಿಗೇರಿ, ಎಮ್.ಜೆ. ಕಾಸ್ತರ, ಮೈಲಾರಪ್ಪ ಅರೆಕಲ್ಲ, ಎಸ್‌ಡಿಎಮ್‌ಸಿ ಸದಸ್ಯರು, ಗುರುವೃಂದ, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.
ಶಿಕ್ಷಕರು ಈಗಾಗಲೇ ಬಿಸಿ ಊಟ, ರಾಗಿ ಮಾಲ್ಟ್, ಮೊಟ್ಟೆ, ಹಾಲು ವಿತರಣೆಯ ಕಾರ್ಯವನ್ನು ಜವಾಬ್ದಾರಿಯಿಂದ ಮಾಡುತ್ತಾ ಬರುತ್ತಿದ್ದು, ಶ್ರೀಅಜೀಂ ಪ್ರೇಮಜೀ ಫೌಂಡೇಶನ್ ಕೊಡಮಾಡಿರುವ 1500 ಕೋಟಿ ಹಣದ ಯೋಜನೆಯನ್ನು ಗುರುವೃಂದ ಯಶಸ್ವಿಯಾಗಿ ನಿರ್ವಹಿಸಬೆಕೆಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.