ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಹಳ್ಳದಕೇರಿ ಓಣಿಯ ನಿವಾಸಿಗಳು ರಸ್ತೆ ದುರಸ್ಥಿ ಮತ್ತು ಸಮರ್ಪಕ ಕುಡಿಯುವ ನೀರಿಗಾಗಿ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಆಕಸ್ಮಿಕವಾಗಿ ಈ ಮಾರ್ಗವಾಗಿ ಆಗಮಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ ಅವರನ್ನು ತಡೆದು ನಿಲ್ಲಿಸಿದ ಮಹಿಳೆಯರಾದ ಗಿರಿಜಮ್ಮ ಕರೆತ್ತಿನ, ನೀಲವ್ವ ಕೊಂಗಿ, ಶೈಲವ್ವ ಹಳ್ಳಿಕೇರಿ, ಪಾರ್ವತೆವ್ವ ಬೇವಿನಮರದ ಮತ್ತಿತರರು ತಾವು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮದು ರೈತಾಪಿ ವರ್ಗದ ಜನರೇ ಹೆಚ್ಚಿರುವ ಪ್ರದೇಶವಾಗಿದ್ದು, ರಸ್ತೆ ಡಾಂಬರೀಕರಣಕ್ಕಾಗಿ ತಿಂಗಳ ಹಿಂದೆಯೇ ರಸ್ತೆ ಅಗೆದು ಕೈಬಿಟ್ಟಿದ್ದಾರೆ. ದೂದಪೀರಾಂ ದರ್ಗಾ ಹತ್ತಿರದ ರಸ್ತೆ ನಿರ್ಮಾಣಕ್ಕೆ 2 ವರ್ಷದ ಹಿಂದೆಯೇ ಭೂಮಿಪೂಜೆ ಮಾಡಿದ್ದರೂ ರಸ್ತೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರ ವಾಸುದೇವ ಸ್ವಾಮಿ, ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಗುತ್ತಿಗೆದಾರರ ನಿರ್ಲಕ್ಷದಿಂದ ಅರ್ಧಕ್ಕೆ ನಿಂತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ. ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ 2 ದಿನಗಳಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿಗೊಳಿಸಲಾಗುವುದು. ಕುಡಿಯುವ ನೀರಿನ ಪೈಪ್‌ಲೈನ್ ಹಳೆಯದಾಗಿದ್ದು, ಹೊಸ ಪೈಪ್‌ಲೈನ್ ಅಳವಡಿಕೆಗೆ ಸರ್ಕಾರಕ್ಕೆ ಕ್ರಿಯಾಯೋಜನೆ ಕಳುಹಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, 2 ದಿನಗಳಲ್ಲಿ ದುರಸ್ಥಿ ಕಾರ್ಯ ನಡೆಯದ್ದಿದ್ದರೆ ತಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು. ಈ ವೇಳೆ ನಿವಾಸಿಗಳಾದ ಮಂಜುನಾಥ ಮಾಗಡಿ, ಸುಭಾನಸಾಬ ಹೊಂಬಳ, ಅಭಯ ಜೈನ್, ಚಂದ್ರು ಮಾಗಡಿ, ಮಲ್ಲಿಕಾರ್ಜುನ ಅಣ್ಣಿಗೇರಿ, ಮುತ್ತು ನೀರಲಗಿ, ಮಲ್ಲು ಅಂಕಲಿ, ಫಕ್ಕಿರೇಶ ಭಜಂತ್ರಿ, ನೀಲವ್ವ ಹಳ್ಳಿಕೇರಿ, ಶ್ವೇತಾ ರೋಣದ, ಶೇಖವ್ವ ನೂಲ್ವಿ, ನೀಲವ್ವ ಹುಲಕೋಟಿ, ಲಕ್ಷ್ಮವ್ವ ಬೇವಿನಮನರದ ಸೇರಿ ಅನೇಕರಿದ್ದರು.
ಮಳೆಗಾಲ ಪ್ರಾರಂಭವಾದಾಗಿನಿಂದ ಕೆಸರು ತುಂಬಿರುವ ರಸ್ತೆಯಲ್ಲಿ ಹಾದು ಹೋಗಲಾಗುತ್ತಿಲ್ಲ. ಮಕ್ಕಳು, ವಯಸ್ಸಾದವರನ್ನು ಕೈ ಹಿಡಿದು ಹೊತ್ತುಕೊಂಡು ಸಾಗಿಸಬೇಕಾಗಿದೆ. ಬೈಕ್, ಅಟೋ ಸೇರಿ ವಾಹನ, ಎತ್ತು ಚಕ್ಕಡಿ ಸಂಚಾರ ಬಂದ್ ಆಗಿವೆ. ಮಳೆಗಾಲದಲ್ಲೂ 15-20 ದಿನಗಳಿಗೊಮ್ಮೆ ಕುಡಿಯುವ ನೀರು. ನಿತ್ಯದ ಬದುಕು ಕಷ್ಟಕರವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಗೋಳು ಕೇಳದೇ ಕಂಡೂ ಕಾಣದಂತೆ ಜಾಣ ಮೌನ ತಾಳಿದ್ದಾರೆ. ಕೂಡಲೇ ರಸ್ತೆ ದುರಸ್ಥಿ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರತಿಭಟನಾಕಾರರು ಅಲವತ್ತುಕೊಂಡರು.