ಬೆಂಗಳೂರು: ಆಸ್ತಿ ವಿವರಗಳನ್ನು ಮರೆಮಾಚಿ ತೆರಿಗೆ ವಂಚಿಸುತ್ತಿರುವವರಿಗೆ ಬಿಸಿ ಮುಟ್ಟಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೃಹತ್ ಆಸ್ತಿ ಸರ್ವೆಗೆ ಸಜ್ಜಾಗಿದೆ.
ಬೆಂಗಳೂರಿನಾದ್ಯಂತ ಪ್ರತಿಯೊಬ್ಬರ ಹೆಸರಿನಲ್ಲಿರುವ ಆಸ್ತಿ ಹಾಗೂ ಕಟ್ಟಡಗಳ ನೈಜ ವಿಸ್ತೀರ್ಣದ ವಿವರಗಳನ್ನು ಪತ್ತೆಹಚ್ಚಲು ಸಮಗ್ರ ಸಮೀಕ್ಷೆ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ.
ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಹಾಗೂ ಖಾತಾ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಸರ್ವೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ನಗರದ ಎಲ್ಲ ಆಸ್ತಿಗಳನ್ನು ಸಮೀಕ್ಷೆ ನಡೆಸಿ, ಅವುಗಳಿಗೆ GPS ಟ್ಯಾಗಿಂಗ್ ಅಳವಡಿಸಲು ಸಿದ್ಧತೆ ನಡೆದಿದೆ.
ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಈ ಬೃಹತ್ ಆಸ್ತಿ ಸರ್ವೆ ನಡೆಯಲಿದೆ ಎನ್ನಲಾಗಿದೆ.
ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ತೋರಿಸಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಸಮೀಕ್ಷೆ ನೆರವಾಗಲಿದೆ.
ಸರ್ವೆ ವೇಳೆ ಪ್ರತಿಯೊಂದು ಆಸ್ತಿಯ ವಿವರಗಳನ್ನು ಡಿಜಿಟಲ್ ಇ-ಖಾತಾ ವ್ಯವಸ್ಥೆಗೆ ಸೇರ್ಪಡೆಗೊಳಿಸಿ, GPS ಲೊಕೇಶನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಅಧಿಕೃತ ದಾಖಲೆಗಳಿಲ್ಲದೆ ನಿರ್ಮಿಸಲಾಗಿರುವ ಅನಧಿಕೃತ ಆಸ್ತಿಗಳನ್ನೂ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಸದ್ಯ ಜಿಬಿಎ ವ್ಯಾಪ್ತಿಯ ಆಸ್ತಿ ತೆರಿಗೆ ವ್ಯವಸ್ಥೆಯಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಅಧಿಕೃತ ಕಂದಾಯ ದಾಖಲೆಗಳಿಗೆ ಸೇರ್ಪಡೆಗೊಳಿಸುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ.
ಸಮೀಕ್ಷೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ಆಸ್ತಿ ಮಾಲೀಕತ್ವದ ನಿಖರ ಮಾಹಿತಿಯೊಂದಿಗೆ ಸಮಗ್ರ ಡಿಜಿಟಲ್ ದಾಖಲೆ ಸಿದ್ಧವಾಗಲಿದೆ. ಆಸ್ತಿ ವಿವರಗಳನ್ನು ಸುಳ್ಳಾಗಿ ನೀಡಿ ತೆರಿಗೆ ವಂಚಿಸಿರುವುದು ಪತ್ತೆಯಾದರೆ ಅಂತಹ ಮಾಲೀಕರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.



