ವಿಜಯಸಾಕ್ಷಿ ಸುದ್ದಿ, ನರೇಗಲ್ : ರೈತರು ಬೆಳೆದ ಬೆಳೆ ಪ್ರಕೃತಿ ವಿಕೋಪದಿಂದ ನಾಶವಾದರೆ ಅಥವಾ ಬೆಳೆ ಸರಿಯಾಗಿ ಬಾರದೆ ರೈತರಿಗೆ ನಷ್ಟವಾದರೆ ಸಹಾಯವಾಗಲಿ ಎಂದು ಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆ ರೂಪಿಸಲಾಗಿದೆ. ಆದರೆ, ಸಮೀಪದ ಮಾರನಬಸರಿ ಗ್ರಾ.ಪಂ ವ್ಯಾಪ್ತಿಯ ಬೂದಿಹಾಳ ಗ್ರಾಮದ ರೈತರು ತಾಂತ್ರಿಕ ಕಾರಣದಿಂದ ಬೆಳೆ ವಿಮೆ ಕಂತು ತುಂಬಲಾಗುತ್ತಿಲ್ಲ.
ನರೇಗಲ್ ಹೋಬಳಿಯ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ವಿಮೆ ಪಾವತಿಸಲು ಜುಲೈ 15, ಗೋವಿನ ಜೋಳ ಜುಲೈ 17 ತೊಗರಿ ಜೂ 31 ಕೊನೆಯ ದಿನಾಂಕವಾಗಿದೆ. ಆದರೆ, ಬೂದಿಹಾಳ ಗ್ರಾಮದ ರೈತರ ಬೆಳೆ ವಿಮೆ ಕಂತು ಪಾವತಿಯಾಗುತ್ತಿಲ್ಲ. ಬೆಳೆ ವಿಮೆ ತುಂಬುವ ಸಂರಕ್ಷಣೆ ತಂತ್ರಾಂಶದಲ್ಲಿ ವಿಮೆ ಪಾವತಿಸಲು ಮುಂದಾದಾಗ ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಬೂದಿಹಾಳ ಗ್ರಾಮ ಕಾಣಸಿಗುತ್ತಿಲ್ಲ. ಇದರಿಂದಾಗಿ ಗ್ರಾಮದ ರೈತರು ಬೆಳೆ ವಿಮೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಲವು ದಿನಗಳಿಂದ ಸೇವಾ ಕೇಂದ್ರಗಳಿಗೆ ತೆರಳಿ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬೂದಿಹಾಳ ಗ್ರಾಮದ ರೈತರಿಗೆ ಬೆಳೆ ವಿಮೆ ಇದ್ದೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಒನ್, ಸಿಎಸ್‌ಸಿ ಕೇಂದ್ರದವರನ್ನು ವಿಚಾರಿಸಿದರೆ ತಾಂತ್ರಿಕ ಸಮಸ್ಯೆ ಇದೆ ಎಂದು ಉತ್ತರಿಸುತ್ತಾರೆ. ಸಮಸ್ಯೆಯನ್ನು ಸಂಬಂಧಪಟ್ಟವರು ತಕ್ಷಣವೇ ಬಗೆಹರಿಸಿ ವಿಮೆ ತುಂಬಲು ಸಹಕರಿಸಬೇಕು ಎಂದು ಗ್ರಾಮದ ರೈತರಾದ ರವಿ ಪಾಟೀಲ, ಚನ್ನಪ್ಪ ಕರಮುಡಿ, ಮುತ್ತಪ್ಪ ಚಿಗರಿ ಒತ್ತಾಯಿಸಿದ್ದಾರೆ.
ಮಾರನಬಸರಿ ಗ್ರಾ.ಪಂ ಈ ಹಿಂದೆ ರೋಣ ತಾಲೂಕಿನಲ್ಲಿತ್ತು. ಈಗ ಗಜೇಂದ್ರಗಡ ತಾಲೂಕಿಗೆ ಸೇರ್ಪಡೆಯಾಗಿದೆ. ರೈತರ ಎಫ್‌ಐಡಿ ಗಜೇಂದ್ರಗಡ ತಾಲೂಕಿಗೆ ನೋಂದಣಿಯಾಗುತ್ತಿದೆ. ಕೃಷಿ ಇಲಾಖೆಯಿಂದ ಈಗಾಗಲೇ ಎಫ್‌ಐಡಿ ಮಾಡಿಕೊಡಲಾಗುತ್ತಿದೆ. ಬೂದಿಹಾಳ ಗ್ರಾಮದ ಸಮಸ್ಯೆ ಗಮನಕ್ಕೆ ಬಂದಿದ್ದು, ವಿಮಾ ಕಂಪನಿ ಹಾಗೂ ಸಂರಕ್ಷಣಾ ತಂತ್ರಾಂಶದ ಮುಖ್ಯಸ್ಥರಿಗೆ ಸಮಸ್ಯೆಯ ಬಗ್ಗೆ ಇ-ಮೇಲ್ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು.
– ರವೀಂದ್ರಗೌಡ ಪಾಟೀಲ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ರೋಣ.



