ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಾಲಯ: ಡಿಸಿಎಂ ಡಿ.ಕೆ. ಶಿವಕುಮಾರ್

0
Spread the love

ಹಾಸನ: ರಾಜ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಇದಕ್ಕೆ ಜನರ ಹಾಗೂ ತಾಯಿ ಹಾಸನಾಂಬೆಯ ಆಶೀರ್ವಾದ ಕಾರಣ‌.‌ ತಾಯಿಯ ಆಶೀರ್ವಾದದಿಂದ ಎಲ್ಲರ ಆಶಯಗಳು ಈಡೇರಲಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಮಂಗಳವಾರ ಸಂಜೆ ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ನಂತರ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

Advertisement

“ದುಃಖವನ್ನು ದೂರ ಮಾಡುವವಳು ದುರ್ಗಾ ದೇವಿ. ಶಕ್ತಿ ಸ್ವರೂಪಿಣಿ, ತಾಯಿ ಹಾಸನಾಂಬೆಯ ದರ್ಶನವನ್ನ ಪ್ರತಿ ವರ್ಷ ತಪ್ಪದೇ ಮಾಡಿಕೊಂಡು ಬರುತ್ತಿದ್ದೇವೆ. ಜನರು ಸಹ ತಾಯಿಯ ಆಶೀರ್ವಾದ ಪಡೆದು ನೆಮ್ಮದಿ, ಶಾಂತಿ, ಬದುಕನ್ನು ಪಡೆಯಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಜನರಲ್ಲಿ ದೊಡ್ಡ ಸಂಭ್ರಮ ಮನೆ ಮಾಡಿದೆ” ಎಂದರು.

“ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಜನರು ಎಷ್ಟೇ ದೂರದಿಂದ ಬಂದರೂ ಸಹ ಒಂದು ಕ್ಷಣ ದೇವರ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿದರೆ ಏನೋ ನೆಮ್ಮದಿ ದೊರೆಯುತ್ತದೆ. ಹಾಸನ‌ ಜಿಲ್ಲಾ ಉಸ್ತುವಾರಿ ಸಚಿವರಾದ‌ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಜಿಲ್ಲಾಡಳಿತ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿ ಪ್ರತಿಯೊಬ್ಬರಿಗೂ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ. ಬಹಳ ಶಿಸ್ತಿನಿಂದ ಕೆಲಸ ಮಾಡಿದ್ದಾರೆ” ಎಂದು ಶ್ಲಾಘಿಸಿದರು.

“ಸಾರ್ವಜನಿಕರು ‌ಸಹ ಸಾಕಷ್ಟು ಸಹಕಾರ ನೀಡಿದ್ದಾರೆ. ತಮ್ಮ ಅಂಗಡಿಗಳ ಮುಂದೆ ದೀಪಾಲಂಕಾರ, ವಿವಿಧ ಬಗೆಯ ಅಲಂಕಾರ ಮಾಡಿದ್ದಾರೆ. ನಾನು ದೇವಿಯ ಭಕ್ತನಾಗಿ ಪ್ರತಿಯೊಬ್ಬರಿಗೂ ವಂದಿಸುತ್ತೇನೆ” ಎಂದರು.

ವಿಶೇಷವಾಗಿ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದು ಕೇಳಿದಾಗ, “ನಿಮಗೆ ಹಾಗೂ ನಮಗೆ ತಾಯಿ ಒಳ್ಳೆಯದನ್ನು ಮಾಡಲಿ. ರಾಜ್ಯಕ್ಕೆ ನೆಮ್ಮದಿ, ಶಾಂತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ” ಎಂದರು. ಹೆಚ್ಚಿನ ಅಧಿಕಾರಕ್ಕೆ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದಾಗ, “ನಾನುಂಟು ತಾಯಿಯುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ” ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here