ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದ್ದರಿರುವ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗಳಿಗೆ ಬೀಗ ಹಾಕಿಸುವಂತೆ ಕರವೇ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಒತ್ತಾಯಿಸಿದರು.
ನ. 4ರಂದೇ ಪುರಸಭೆ ಚುನಾವಣಿತ ಸದಸ್ಯರ ಆಡಳಿತಾವಧಿ ಕೊನೆಗೊಂಡಿದೆ. ಆದರೆ ಇನ್ನೂ 15 ತಿಂಗಳು ನಮಗೆ ಅಧಿಕಾರ ನಡೆಸಲು ಅವಕಾಶ ನೀಡಬೇಕು ಎಂದು ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಸದಸ್ಯರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಪುರಸಭೆಯಲ್ಲಿನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿ ಹಾಗೂ ಕೊಠಡಿಯಲ್ಲಿನ ನಾಮಫಲಕಗಳನ್ನು ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಪುರಸಭೆಗೆ ಆಗಮಿಸಿ ಅವಧಿ ಪೂರ್ಣಗೊಂಡಿದ್ದರೂ ಅವರ ನಾಮಫಲಕ ಏಕೆ ತೆರವುಗೊಳಿಸಿಲ್ಲ ಎಂದು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ಪ್ರಶ್ನಿಸಿದರು. ತಕ್ಷಣ ಬೀಗ ಹಾಕಬೇಕು ಎಂದು ಪಟ್ಟು ಹಿಡಿದರು. ಇದೇ ವೇಳೆ ಮುಖ್ಯಾಧಿಕಾರಿಗಳು, ನಾನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಕಾಲಾವಕಾಶ ನೀಡಿ ಎಂದರು.
ಆಡಳಿತ ಮಂಡಳಿಯ ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸಿಬ್ಬಂದಿ ನಾಮಫಲಕ ತೆರವುಗೊಳಿಸಿ ಕೊಠಡಿಗಳಿಗೆ ಬೀಗ ಹಾಕಿದರು. ಈ ವೇಳೆ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ, ಕಾನೂನಿನ ಪ್ರಕಾರ ನವೆಂಬರ್ 4ರಂದೇ ನಾಮಫಲಕ ತೆರವುಗೊಳಿಸಬೇಕಾಗಿತ್ತು. ಆದರೆ ಇಷ್ಟು ದಿನ ಬಿಟ್ಟಿದ್ದು ಅಧಿಕಾರಿಗಳ ತಪ್ಪು. ಈಗಲಾದರೂ ಮುಖ್ಯಾಧಿಕಾರಿಗಳು ನಮ್ಮ ಮನವಿ ಸ್ಪಂದಿಸಿದ್ದು, ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುರಸಭೆ ಸದಸ್ಯರ ಅಧಿಕಾರಾವಧಿ ಗೊಂದಲಕ್ಕೆ ಶುಕ್ರವಾರ ಕೊನೆಗೂ ತೆರೆ ಬಿದ್ದಿತು.


