ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗಗಳ ಸಬಲೀಕರಣವಾದರೆ ದೇಶದ ಅಭಿವೃದ್ಧಿ ಸಾಧ್ಯವಿದೆ. ಅದಕ್ಕಾಗಿ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಪೂರಕ ಸಹಾಯ-ಸಹಕಾರ ಮಾಡುತ್ತಿದೆ ಎಂದು ಕೊಪ್ಪಳ ವಿಭಾಗದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಅವರು ಹೇಳಿದರು.
ಪಟ್ಟಣದ ಶಂಖ ಬಸದಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಜ್ಞಾನ ವಿಕಾಸದ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆ, ಕೌಶಲ್ಯವನ್ನು ಗುರುತಿಸಿ ಬೆಳಕಿಗೆ ತರುವ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ಹೆಣ್ಣು ಕುಟುಂಬ-ಸಮಾಜದ ಕಣ್ಣಾಗಿದ್ದು, ಮಹಿಳೆಗೆ ಶಿಕ್ಷಣ ಹಾಗೂ ಜ್ಞಾನವನ್ನು ನೀಡಿದಲ್ಲಿ ಆ ಕುಟುಂಬ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲಗೊಳ್ಳಲು ಸಾಧ್ಯ. ಮಹಿಳೆಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಧಾರವಾಡದ ಎಸ್‌ಡಿಎಂಸಿ ವೀರನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯ ಡಾ. ಬಸವರಾಜ ಮಾತನಾಡಿ, ಪ್ರತಿ ದಿನ ಹೃದಯಾಘಾತದಿಂದ 1 ಲಕ್ಷಕ್ಕೆ 63 ಜನ ಮರಣ ಹೊಂದುತ್ತಿದ್ದಾರೆ. ಇದರಲ್ಲಿ 40-50 ವಯಸ್ಸಿನ ಯುವಕರು ಹೆಚ್ಚಾಗಿ ಹೃದಯಾಘಾತದಿಂದ ನಿಧನ ಹೊಂದುತ್ತಿರುವುದು ನೋವಿನ ಸಂಗತಿಯಾಗಿದೆ. ಗ್ರಾಮೀಣ ಭಾಗದ ಯುವಕರಿಗಿಂತ ನಗರ ಭಾಗದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ತಹಸೀಲ್ದಾರ ರಾಘವೇಂದ್ರ ಕೆ, ಪುರಸಭೆ ಸದಸ್ಯ ರಾಜು ಕುಂಬಿ, ಅಶ್ವಿನಿ ಅಂಕಲಕೋಟಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಪಿಎಸ್‌ಐ ನಾಗರಾಜ ಗಡಾದ ಇದ್ದರು. ಸಭೆಯ ಅಧ್ಯಕ್ಷತೆಯನ್ನು ಸುರೇಂದ್ರಗೌಡ ಪಾಟೀಲ ವಹಿಸಿದ್ದರು.
ಸಭೆಯಲ್ಲಿ ನಂದಕುಮಾರ್ ಪಾಟೀಲ ಸೇರಿದಂತೆ ನೂರಾರು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಂತಾ ಸ್ವಾಗತಿಸಿದರು. ಕ್ಷೇತ್ರ ಯೋಜನಾಧಿಕಾರಿ ಪುನೀತ ಓಲೇಕಾರ, ಸಿಬ್ಬಂದಿಗಳು ನಿರ್ವಹಿಸಿದರು.
ಹೃದಯಾಘಾತಕ್ಕೆ ವಂಶಾವಳಿ, ದಢೂತಿ ದೇಹ, ಸಿಗರೇಟ್ ಸೇವನೆ, ಒತ್ತಡದ ಜೀವನ ಹಾಗೂ ವಿಶ್ರಾಂತಿ ರಹಿತ ಜೀವನ, ಕೌಟುಂಬಿಕ ಒತ್ತಡ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯು ಕುಸಿದು ಬಿದ್ದ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಸಾವು ತಪ್ಪಿಸಲು ಸಾಧ್ಯ ಎಂದು ಡಾ. ಬಸವರಾಜ ತಿಳಿಸಿದರು.



