ಬಳ್ಳಾರಿ:- ಬಳ್ಳಾರಿ–ಸಿರುಗುಪ್ಪ ರಸ್ತೆಯ ದೇವಿನಗರ ಕ್ಯಾಂಪ್ ಸಮೀಪ ಇಂದು ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ರಸ್ತೆ ಬದಿಯ ಕಿರು ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದ ಈ ಕುಟುಂಬ, ತಮಿಳುನಾಡಿನಿಂದ ವಾಪಸ್ ಆಗುವ ವೇಳೆ ಅಪಘಾತ ಸಂಭವಿಸಿದೆ.
ನಿದ್ದೆ ಮಂಪರು ಹಾಗೂ ಮಂಜುಗಟ್ಟಿದ ವಾತಾವರಣದ ಹಿನ್ನೆಲೆ ರಸ್ತೆ ಸ್ಪಷ್ಟವಾಗಿ ಕಾಣದೆ, ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಕಾರು ಕಿರು ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಹಾಗೂ ಜೊತೆಯಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇನ್ನಿಬ್ಬರನ್ನು ಆಂಬುಲೆನ್ಸ್ ಮೂಲಕ ಬಳ್ಳಾರಿಯ ಆಸ್ಪತ್ರೆಗೆ ರವಾನಿಸಲಾಗಿದೆ.



