ಹುಬ್ಬಳ್ಳಿ: ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಪೈರಸಿ ವಿರುದ್ಧದ ಮಾತು ಎನ್ನುವುದನ್ನು ಅವರು ಈಗಾಗಲೇ ಸ್ಪಷ್ಟಪಡಿಸಿದ್ದರೂ, ಅದು ದರ್ಶನ್ ಅಭಿಮಾನಿಗಳ ವಿರುದ್ಧ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಸುದೀಪ್ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
‘ನನಗೆ ವಾರ್ ಬೇಕಿಲ್ಲ. ಯಾರಿಗಾದರೂ ಗೊಂದಲ ಇದ್ದರೆ, ಅಲ್ಲಿಯೇ ಹೋಗಿ ನೀವು ಯಾರಿಗೆ ಹೇಳಿದ್ದು ಎಂದು ಕೇಳಬೇಕು. ನಾನು ಯಾರಿಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ’ ಎಂದು ಸುದೀಪ್ ಹೇಳಿದ್ದಾರೆ.
ದರ್ಶನ್ ಹಾಗೂ ತಮ್ಮ ನಡುವೆ ಬಿರುಕು ಇದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ‘ನಾವು ಹಿಂದೆ ಗೆಳೆಯರಾಗಿದ್ದೆವು. ಈಗ ಬೇರೆ ಆಗಿರಬಹುದು. ಆದರೆ ದರ್ಶನ್ ಬಗ್ಗೆ ನಾನು ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ. ಇತಿಹಾಸ ಕೆದಕಿ ನೋಡಿ, ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದರು.
‘ಆಗ ಮಾತನಾಡಿಲ್ಲ ಅಂದರೆ ಈಗೇಕೆ ಮಾತನಾಡುತ್ತೇನೆ. ನನ್ನ ಫೋಕಸ್ ಬೇರೆ ಇದೆ. ಏನೇನೋ ಮಾತನಾಡಿಕೊಂಡು ಇರೋಕೆ ನಾನು ದಡ್ಡ ಅಲ್ಲ. ನಾನು ಅಂದು ಕಾಫಿ ಮಾತ್ರ ಕುಡಿದಿದ್ದೆ’ ಎಂದು ವ್ಯಂಗ್ಯವಾಗಿ ಹೇಳಿದರು.
ಆಗು ಹೋಗುಗಳ ಬಗ್ಗೆ ನೋವಿದೆ ಎಂದು ಒಪ್ಪಿಕೊಂಡ ಸುದೀಪ್, ‘ಹಾಗಾಗಬಾರದಿತ್ತು ಎಂದು ಅನೇಕ ಬಾರಿ ಹೇಳಿದ್ದೇನೆ. ಅವರ ಅಭಿಮಾನಿಗಳ ನೋವು ನನಗೆ ಅರ್ಥವಾಗುತ್ತದೆ. ಆ ವಿಷಯ ಕೆದಬೇಡಿ ಎಂದು ಹೇಳಿದ್ದೇನೆ. ಅದನ್ನು ಅವರ ಅಭಿಮಾನಿಗಳೇ ಮೆಚ್ಚಿದ್ದರು’ ಎಂದರು.
ನಮ್ಮ ಅಭಿಮಾನಿಗಳು ಅವರನ್ನು ಇಷ್ಟಪಡುವುದು, ಅವರ ಅಭಿಮಾನಿಗಳು ನಮ್ಮನ್ನು ಇಷ್ಟಪಡುವುದನ್ನು ಸಹಿಸದ ಗುಂಪುಗಳು ಈ ರೀತಿಯ ಗೊಂದಲ ಸೃಷ್ಟಿಸುತ್ತಿವೆ. ನಟರಾಗಿ ನಾವು ಎಂದಿಗೂ ಕಿತ್ತಾಡಿಲ್ಲ. ನಮ್ಮಿಬ್ಬರ ನಡುವೆ ಏನೇ ಇದ್ದರೂ ಅದು ನಮ್ಮಿಬ್ಬರ ಮಧ್ಯೆ ಇರುವ ವಿಚಾರ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.



