HomeIndia Newsಕರೂರು ಕಾಲ್ತುಳಿತ ನನ್ನ ರಾಜಕೀಯ ಜೀವನದ ಆಳವಾದ ಗಾಯ: ಸ್ಮಾರಕ ನಿರ್ಮಾಣ ಘೋಷಿಸಿದ ಸಿಎಂ ವಿಜಯ್

ಕರೂರು ಕಾಲ್ತುಳಿತ ನನ್ನ ರಾಜಕೀಯ ಜೀವನದ ಆಳವಾದ ಗಾಯ: ಸ್ಮಾರಕ ನಿರ್ಮಾಣ ಘೋಷಿಸಿದ ಸಿಎಂ ವಿಜಯ್

For Dai;y Updates Join Our whatsapp Group

ತಮಿಳುನಾಡು: ಕರೂರು ಕಾಲ್ತುಳಿತ ದುರಂತವು ತನ್ನ ರಾಜಕೀಯ ಜೀವನದ ಅತ್ಯಂತ ನೋವಿನ ಅಧ್ಯಾಯವಾಗಿದ್ದು, ಆ ಘಟನೆ ಎಂದಿಗೂ ಮರೆಯಲಾಗದ ಆಳವಾದ ಗಾಯವಾಗಿ ಉಳಿಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಹೇಳಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ವಿಜಯ್, ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಕಾಲ್ತುಳಿತ ದುರಂತಕ್ಕೆ ಪೊಲೀಸರು ಜನಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸಲು ವಿಫಲರಾದರು ಎಂದು ಆರೋಪಿಸಿದರು. ಈ ದುರಂತದ ಹೊಣೆಯನ್ನು ತಮ್ಮ ಮೇಲೆ ಹೊರಿಸಲು ಡಿಎಂಕೆ ಸರ್ಕಾರ ಪ್ರಯತ್ನಿಸಿತು ಎಂದು ಕೂಡ ಟೀಕಿಸಿದರು.

ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ವಿಜಯ್ ಭಾವುಕರಾದರು. “ನನ್ನ ರಾಜಕೀಯ ಜೀವನದಲ್ಲಿ ಎಷ್ಟೇ ಯಶಸ್ಸು ಸಿಕ್ಕರೂ, ಅಮಾಯಕ ಜೀವಗಳ ಸಾವಿನಿಂದಾದ ಈ ನೋವನ್ನು ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

“ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕೆಲವು ಗಾಯಗಳು ಎಂದಿಗೂ ಮಾಸುವುದಿಲ್ಲ. ನನ್ನ ಜೀವನದಲ್ಲಿ ಅಂಥ ಅತಿ ದೊಡ್ಡ ಗಾಯವೆಂದರೆ ಕರೂರು ಕಾಲ್ತುಳಿತ ದುರಂತ” ಎಂದು ವಿಜಯ್ ಹೇಳಿದರು.

ಚುನಾವಣಾ ಪ್ರಚಾರದ ವೇಳೆ ರಾಜ್ಯದಾದ್ಯಂತ ಜನರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪೆರಂಬಲೂರಿನಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ಸಭೆ ರದ್ದುಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದರು. ಆದರೆ, ಕರೂರಿನಲ್ಲಿ ಅದಕ್ಕಿಂತ ಹೆಚ್ಚಿನ ಜನರು ಸೇರಿದ್ದರೂ ಯಾವುದೇ ಎಚ್ಚರಿಕೆ ನೀಡಲಿಲ್ಲ ಎಂದು ಆರೋಪಿಸಿದರು.

ನಮಕ್ಕಲ್ ಸಭೆಯ ಬಳಿಕ ಕರೂರಿಗೆ ಆಗಮಿಸಿದ್ದೇವೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದರೆ ಕಾರ್ಯಕ್ರಮವನ್ನು ರದ್ದುಗೊಳಿಸುವ ಅಧಿಕಾರ ಪೊಲೀಸರಿಗೆ ಇತ್ತು. ಆದರೆ ಅವರು ಹಾಗೆ ಮಾಡದೆ ನಮ್ಮನ್ನು ಸ್ಥಳಕ್ಕೆ ಕರೆತಂದರು. ನಾನು ಅವರನ್ನು ಸಂಪೂರ್ಣವಾಗಿ ನಂಬಿದ್ದೆ. ಅಂದು ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಕೂಡ ತಿಳಿಸಿದ್ದೆ. ಇಂತಹ ದುರಂತ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ವಿಜಯ್ ಹೇಳಿದರು.

ಘಟನೆಗೆ ಯಾರು ಹೊಣೆ? ಇಷ್ಟೊಂದು ದೊಡ್ಡ ಜನಸಮೂಹಕ್ಕೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತೇ ಎಂಬ ಪ್ರಶ್ನೆಯನ್ನು ಕೂಡ ಅವರು ಎತ್ತಿದರು. ತಮ್ಮನ್ನು ನೋಡಲು ಬಂದಿದ್ದ ಹಲವು ಮಕ್ಕಳು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದರು.

ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಗೌರವಾರ್ಥ ಸ್ಮಾರಕ ನಿರ್ಮಿಸಲಾಗುವುದು ಎಂದು ವಿಜಯ್ ಘೋಷಿಸಿದರು. “ಈ ದುರಂತವನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳಬೇಕು. ಇಂತಹ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಪ್ರವೃತ್ತಿಗೆ ತೆರೆ ಬೀಳಬೇಕು. ಈ ಉದ್ದೇಶದಿಂದ ಟಿವಿಕೆ ಕರೂರಿನಲ್ಲಿ ಸ್ಮಾರಕ ನಿರ್ಮಿಸಲಿದೆ” ಎಂದು ಅವರು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img