ರಾಯಚೂರು: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಸಿಮೆಂಟ್ ಟ್ಯಾಂಕರ್ ಮತ್ತು ಬುಲೆರೋ ವಾಹನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೃತರು ಹಾಸನ ಮತ್ತು ಚಿಕ್ಕಮಗಳೂರು ಮೂಲದವರು ಎಂದು ತಿಳಿದುಬಂದಿದೆ. ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂರು ವರ್ಷದ ಮಗು ಸೇರಿದ್ದಾರೆ.
ಬೀದರ್‌ನಿಂದ ತುಮಕೂರಿಗೆ ತೆರಳುತ್ತಿದ್ದ ಟ್ಯಾಂಕರ್, ಮಂತ್ರಾಲಯ ಕಡೆಗೆ ಹೋಗುತ್ತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ಜಖಂ ಆಗಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಗಾಯಾಳುಗಳನ್ನು ತಕ್ಷಣವೇ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



