ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧ ಪಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ಮುಖ್ಯವಾಗುತ್ತದೆ, ಉಳಿದವರ ಮಾತು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಘಟನೆ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಜಕೀಯ ಮಾಡ್ತಿರೋ ವಿಚಾರಕ್ಕೆ ಮಾತನಾಡಿದ ಅವರು,
ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಘಟನೆ ಬಗ್ಗೆ ಯಾವುದೇ ಕೊಂಕು ಇಲ್ಲದೇ ಪ್ರಧಾನಿಗಳ ಜೊತೆ ನಿಲ್ಲೋದಾಗಿ ಹೇಳಿದ್ದಾರೆ. ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರು ಹಿರಿಯ ಮುಖಂಡರು, ಅನುಭವದಿಂದ ಹೇಳಿದ್ದಾರೆ.
ಕಾಂಗ್ರೆಸ್ ವರಿಷ್ಠರು ಮಾತಾಡಿರೋ ಮಾತಿಗೆ ಮಾತ್ರ ಬೆಲೆ ಹೆಚ್ಚು. ಇದಕ್ಕಿಂತ ಹೆಚ್ಚು ನಾನೇನೂ ಹೇಳೋದಿಲ್ಲ. ಕಾಂಗ್ರೆಸ್‌ನ ಸಹಕಾರ ಇದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ಇಲ್ಲ ಅಂತ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
ಇನ್ನೂ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆ ಹಿಡಿದಿರುವ ವಿಚಾರ ಮತ್ತು ಯುದ್ಧ ಆಗಬೇಕು ಎಂಬ ಒತ್ತಡಗಳ ವಿಚಾರವಾಗಿ ಪ್ರತಿಕ್ರಿಯಿಸಿದರು. ಯುದ್ದ ಮಾಡಬೇಕು ಅನ್ನುವ ಸನ್ನಿವೇಶದ ಬಗ್ಗೆ ನಮ್ಮ ದೇಶದ ಪ್ರಧಾನಿಗಳು ತೀರ್ಮಾನ ಮಾಡ್ತಾರೆ. ಇಡೀ ರಾಷ್ಟ್ರದ ನಾಯಕತ್ವ ಅಲ್ಲ. ವಿಶ್ವದಲ್ಲಿ ಮೋದಿ ಅವರಿಗೆ ಗೌರವ ಇದೆ. ವಿಶ್ವದ ಅನೇಕ ನಾಯಕರು ಈ ಘಟನೆ ಖಂಡಿಸಿದ್ದಾರೆ. ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಕೂಡಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ ಎಂದರು.