ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಸಮಾಜದ ಎರಡು ಕಣ್ಣುಗಳಾದ ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗ ಮಂದಿರಗಳ ಸ್ಥಾಪನೆಯ ಮೂಲಕ ಹಾನಗಲ್ ಕುಮಾರೇಶ್ವರರು ಕೊಡುಗೆ ನೀಡಿದ್ದಾರೆ. ಅಲ್ಲದೆ, ಶಿವಯೋಗ ಮಂದಿರದಲ್ಲಿ ಅಧ್ಯಯನ ಕೈಗೊಂಡ ಅನೇಕ ಸ್ವಾಮಿಗಳಿಗೆ ಮಾದರಿಯಾಗಿದ್ದಾರೆ ಎಂದು ಗದಗ ಡಂಬಳ ತೋಂಟದಾರ್ಯ ಮಠದ ಜ.ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.
ಪಟ್ಟಣದ ಜ.ಅನ್ನದಾನೀಶ್ವರ ಮಠದಲ್ಲಿ ಮಂಗಳವಾರ ಜರುಗಿದ ಹಾನಗಲ್ ಕುಮಾರೇಶ್ವರರ 157ನೇ ಜಯಂತ್ಯುತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ವರು ಮಾತನಾಡಿದರು.
ಜ.ಡಾ.ಅನ್ನದಾನೀಶ್ವರ ಶ್ರೀಗಳ ನೇತೃತ್ವದಲ್ಲಿ 10 ದಿನಗಳವರೆಗೆ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಂಡದ್ದು ಶ್ಲಾಘನೀಯ. ಕುಮಾರೇಶ್ವರರು ಸಾಹಿತ್ಯ, ಕೃಷಿ, ಸಂಗೀತ, ಕಲೆ, ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲಾಗಿದ್ದರು. ಅವರ ಪ್ರೇರಣೆಯಿಂದ ಒಬ್ಬ ಅಂಧ ಬಾಲಕ ಗಾನಯೋಗಿಯಾಗಿ ಅಂಧರ ಬಾಳಿಗೆ ಬೆಳಕಾದ ಪಂ. ಪಂಚಾಕ್ಷರಿ ಗವಾಯಿಗಳಾಗಲು ಕಾರಣೀಕರ್ತರಾದ ಕುಮಾರೇಶ್ವರರ ಸೇವೆ ಎಂದಿಗೂ ಮರೆಯಲಾಗದು ಎಂದರು.
ಸಾನ್ನಿಧ್ಯ ವಹಿಸಿದ್ದ ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿ, ಭಕ್ತಿ ಮಾರ್ಗ, ಜ್ಞಾನ ಮಾರ್ಗದಿಂದ ಜೀವನ ನಡೆಸಿದ ಕುಮಾರೇಶ್ವರರ ಜಯಂತಿ ನಾಡಿನ ಎಲ್ಲ ಅನೇಕ ಸ್ವಾಮಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿದೆ.
ಧರ್ಮಕಾರ್ಯಕ್ಕೆ ಎಲ್ಲರ ಒಗ್ಗೂಡಿಕೆ ತಮಗೆ ಹರ್ಷ ತಂದಿದೆ. ಕುಮಾರೇಶ್ವರರು ಶ್ರೀಮಠಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದು ಸ್ಮರಣೀಯವಾಗಿದೆ ಎಂದರು.
ಜಯಂತಿ ಸಮಿತಿ ಅಧ್ಯಕ್ಷ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಮಣಕವಾಡ ಮೃತ್ಯುಂಜಯ ಸ್ವಾಮಿಗಳು, ಬನ್ನಿಕೊಪ್ಪ ಡಾಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಮುಖಂಡ ಮಿಥುನಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮಿಗಳು, ನಂದಿವೇರಿಮಠದ ಶಿವಕುಮಾರಸ್ವಾಮಿಗಳು, ಮುದುಕೇಶ್ವರ ಶಿವಚಾರ್ಯ ಸ್ವಾಮಿಗಳು, ವಿರೇಶ್ವರ ಶಿವಾಚಾರ್ಯ ಸ್ವಾಮಿಗಳು, ಲಿಂಗನಾಯಕನಹಳ್ಳಿ ಚೆನ್ನವೀರ ಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶ್ರೀಶಿವಯೋಗ ಮಂದಿರ ಸುವರ್ಣ ಮಹೋತ್ಸವದ ಸ್ಮಾರಕ ಗ್ರಂಥ `ಬೆಳಗು’ ಬಿಡುಗಡೆಗೊಳಿಸಲಾಯಿತು.
ಹುಬ್ಬಳ್ಳಿ ಮೂರುಸಾವಿರ ಮಠದ ಜ. ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ವಚನ ಪರಂಪರೆ, ದಾಸೋಹ ಪ್ರಸಾದ ಪರಿಕಲ್ಪನೆ ಮೂಡಿಸಿದ ಕುಮಾರೇಶ್ವರರ ಜಯಂತಿ ಮುಂಡರಗಿಯಲ್ಲಿ ಐತಿಹಾಸಿಕವಾಗಿ ಜರುಗಿದೆ. 200-300 ವರ್ಷಕ್ಕೊಮ್ಮೆ ಮಹಾತ್ಮರು ಜನಿಸುತ್ತಾರೆ ಎಂದು ಹೇಳುತ್ತಾರೆ. ಅವರ ಸಾಲಿನಲ್ಲಿ ಕುಮಾರೇಶ್ವರರು ನಿಲ್ಲುತ್ತಾರೆ ಎಂದರು.