ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕೋಮು-ಸೌಹಾರ್ದತೆಯ ಹರಿಕಾರ, ದ್ವೇಷ ಬಿಡು-ಪ್ರೀತಿ ಮಾಡು ಎಂಬ ಸಂದೇಶ ಸಾರಿದ, ಪವಾಡ ಪುರುಷ ಕರ್ತೃ ಶ್ರೀ ಜ.ಫಕೀರೇಶ್ವರರ ಜಾತ್ರಾ ಮಹೋತ್ಸವದ 2ನೇ ದಿನವಾದ ಮಂಗಳವಾರ ಸಂಜೆ 5ರ ಸುಮಾರಿಗೆ ಜ.ಫ. ಸಿದ್ದರಾಮ ಸ್ವಾಮೀಜಿ ಮತ್ತು ಜ.ಫ. ದಿಂಗಾಲೇಶ್ವರ ಸ್ವಾಮೀಜಿ ಕಡುಬಿನ ಕಾಳಗ ನೆರವೇರಿಸಿದರು.
ಸಂಪ್ರದಾಯದಂತೆ ಉಭಯ ಶ್ರೀಗಳು ಶ್ರೀಮಠದಲ್ಲಿರುವ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕರ್ತೃ ಶ್ರೀಗಳ ಗದ್ದುಗೆಗೆ ನಮಸ್ಕಾರ ಸಲ್ಲಿಸಿ ಜ.ಫ. ಸಿದ್ದರಾಮ ಸ್ವಾಮೀಜಿ ಅಶ್ವಾರೂಢರಾಗಿ ಕಡುಬಿನ ಕಾಳಗಕ್ಕೆ ಸನ್ನದ್ಧರಾದರು. ಇವರ ಜೊತೆಗೆ ಜ.ಫ. ದಿಂಗಾಲೇಶ್ವರ ಶ್ರೀಗಳು ಭಕ್ತರತ್ತ ಬೆಲ್ಲದ ಚೂರನ್ನು ಎಸೆದರು. ಸಂಪ್ರದಾಯದಂತೆ ಕರ್ತೃ ಗದ್ದುಗೆಯ ಸುತ್ತಲೂ ಮೂರು ಸುತ್ತು ಹಾಗೂ ರಥದ ಬೀದಿಯಲ್ಲಿ ಎರಡು ಸುತ್ತು ಕಡುಬಿನ ಕಾಳಗ ನೆರವೇರಿತು.
ಕೊನೆಯ ಸುತ್ತು ಮುಗಿದ ಬಳಿಕ ಸಂಪ್ರದಾಯದಂತೆ ಮುಸ್ಲಿಂ ಕುಟುಂಬದ ಅತ್ತಾರ ಮನೆತನದವರು ಶ್ರೀಗಳಿಗೆ ಗುಲಾಲು ಎರಚುತ್ತಿದ್ದಂತೆ ಕಡುಬಿನ ಕಾಳಗಕ್ಕೆ ತೆರೆ ಬಿದ್ದಿತು. ಈ ಸಂದರ್ಭದಲ್ಲಿ ಗಜರಾಜ ಸಮೇತ, ಭಾಜಾ ಭಜಂತ್ರಿ, ಸಕಲ ವಾದ್ಯಗೋಷ್ಠಿಗಳು, ಝಾಂಜ್ ಮೇಳಗಳು ಭಾಗಿಯಾಗಿದ್ದವು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ, ಲಕ್ಷ್ಮೇಶ್ವರ ಪಿಎಸ್‌ಐ ಮತ್ತು ಸಿಬ್ಬಂದಿಗಳು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದರು.