ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪಟ್ಟಣದ ಹಳೆಯ ಆಸ್ಪತ್ರೆ ಹಿಂಭಾಗದಲ್ಲಿ ನಿರ್ಮಿಸಿರುವ ನೂತನ ವೈದ್ಯರ ವಸತಿ ಗೃಹಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡು ನಾಲ್ಕು ವರ್ಷ ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ.
2019-20 ಹಾಗೂ 2020-21ನೇ ಸಾಲಿನ ಕೆಕೆಆರ್‌ಡಿಬಿ ಹಾಗೂ ಡಿಎಂಎಫ್ ಯೋಜನೆಯಡಿ ಒಟ್ಟು 3 ಕೋಟಿ ರೂ ವೆಚ್ಚದಲ್ಲಿ 8 ವೈದ್ಯರ ವಸತಿ ಗೃಹಗಳು ನಿರ್ಮಾಣಗೊಂಡಿವೆ. ಕಾಮಗಾರಿ ಮುಕ್ತಾಯವಾಗಿ ಸುಮಾರು 4 ವರ್ಷವಾದರೂ ಕಟ್ಟಡ ಸದ್ಬಳಕೆಯಾಗದೆ ಅನುಪಯುಕ್ತವಾಗಿ ಉಳಿದಿದೆ.
ಈ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದ್ದು, ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಳಿಸಿದೆ. ಆದರೆ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವುದು ಬಾಕಿ ಇದ್ದು, ಈ ಬಗ್ಗೆ ವೈದ್ಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವೈದ್ಯರ ವಸತಿ ಗೃಹಗಳ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಅನುದಾನದ ಕೊರತೆಯ ನೆಪ ಹೇಳಿ ಮುಂದೂಡುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ವಸತಿ ಗೃಹಗಳು ಸುಸಜ್ಜಿತವಾಗಿ ನಿರ್ಮಾಗೊಂಡಿದ್ದು, ಹೊಸ ಕಟ್ಟಡದಲ್ಲಿ ವಿಶಾಲವಾದ ಹಾಲ್, ಕಿಚನ್, ಮೂರು ಬೆಡ್ ರೂಮ್‌ಗಳಿವೆ. ಕಟ್ಟಡಕ್ಕೆ ಆಳವಡಿಸಿರುವ ಕಿಟಕಿ ಗ್ಲಾಸ್‌ಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದು, ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದು ನಿಂತು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸುವ ಸರ್ಕಾರ ಮರಳಿ ಕಾಮಗಾರಿ ಎಲ್ಲಿಗೆ ಬಂದಿದೆ ಎಂದು ಕಣ್ಣು ಹಾಯಿಸುವುದಿಲ್ಲ. ಸ್ಥಳೀಯ ಆಡಳಿತವೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾದಂತಾಗುತ್ತದೆ.
ವಿಜಯನಗರ ಜಿಲ್ಲೆಯಲ್ಲಿಯೇ ಹರಪನಹಳ್ಳಿ ದೊಡ್ಡ ಹಾಗೂ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ನಿತ್ಯ ಸಾವಿರಾರು ಜನರು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ಬರುವ ರೋಗಿಗಳಿಗೆ ಸೂಕ್ತ ಸಮಯಕ್ಕೆ ವೈದ್ಯರಿಂದ ಚಿಕಿತ್ಸೆ ಸಿಗಬೇಕು ಮತ್ತು ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂಬ ಕಾರಣಕ್ಕೆ ಕೇಂದ್ರ ಸ್ಥಾನದಲ್ಲಿ ವೈದ್ಯರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ವೈದ್ಯರು ಅಲ್ಲಿ ಉಳಿದುಕೊಳ್ಳುವ ಕಾಲ ಇನ್ನೂ ಕೂಡಿಬಂದಿಲ್ಲ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ವೈದ್ಯರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನೂ ಕೆಲವರು ದೂರದ ನಗರಗಳಿಂದ ಬಂದು ಹೋಗುತ್ತಾರೆ. ಆದರೆ ವೈದ್ಯರಿಗಾಗಿ ನಿರ್ಮಿಸಿರುವ ವಸತಿ ಗೃಹಗಳಲ್ಲಿ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ ವೈದ್ಯರಿಗೆ ಹಸ್ತಾಂತರಿಸಲು ಸಂಬಂಧಿಸಿದ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಮಾತ್ರ ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ವೈದ್ಯರ ವಸತಿ ಗೃಹಗಳ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲಿ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
– ಡಾ.ದತ್ತಾತ್ರೇಯ ಪಿಸೆ.
ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿ.
ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದರಿಂದ ವೈದ್ಯರ ವಸತಿ ಗೃಹಗಳ ನಿರ್ಮಾಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
– ರಾಘವೇಂದ್ರ.
ಎಇಇ, ಲೋಕೋಪಯೋಗಿ ಇಲಾಖೆ ಹರಪನಹಳ್ಳಿ.
ಪಟ್ಟಣದಲ್ಲಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೈದ್ಯರ ವಸತಿ ಗೃಹಗಳು ಪಾಳುಬಿದ್ದು ಅನೈತಿಕ ಚಟುವಟಿಕೆಯ ತಾಣವಾಗಿವೆ ಆದರೆ ಸ್ಥಳೀಯ ಆಡಳಿತ ಈ ಬಗ್ಗೆ ನಿರ್ಲಕ್ಷ್ಯವಹಿಸಿದೆ, ಕೂಡಲೇ ವಸತಿ ಗೃಹಳನ್ನು ವೈದ್ಯರಿಗೆ ಹಸ್ತಾಂತರಿಸಬೇಕು.
– ಎಚ್.ಎಂ. ಸಂತೋಷ.
ಪ್ರಗತಿಪರ ಹೋರಾಟಗಾರ.