ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಮೂರ್ತಿಯ ಶಾಂತಿಯುತ ಮೆರವಣಿಗೆ ವೇಳೆ ಮದ್ದೂರಿನಲ್ಲಿ ಭಾನುವಾರ ರಾತ್ರಿ ಹಿಂದೂಗಳ ಮೇಲೆ ನಡೆದ ಕಲ್ಲು ತೂರಾಟವನ್ನು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮದ್ದೂರಿನಲ್ಲಿ ಮೆರವಣಿಗೆಯ ವೇಳೆ ಉದ್ದೇಶಪೂರ್ವಕವಾಗಿ ಹಿಂದೂಗಳ ಮೇಲೆ ಕಲ್ಲು ಎಸೆದು, ಮೆರವಣಿಗೆ ಬರುವಾಗ ಗಣೇಶ ಮೂರ್ತಿಯ ಮುಂದೆ ಉಗುಳುವದು ಅಕ್ಷಮ್ಯ ಅಪರಾಧ. ಗಲಭೆ ತಡೆಗಟ್ಟುವ ಯೋಗ್ಯತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದೆ. ಗಣೇಶ ವಿಸರ್ಜನೆ ವೇಳೆ ಮುನ್ನೆಚ್ಚರಿಕೆ ವಹಿಸದಿರುವುದು ಈ ಘಟನೆಗೆ ಕಾರಣವಾಗಿದೆ. ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳುವ ಬದಲು ಪೊಲೀಸರು ಅಮಾಯಕ ಗಣೇಶ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಹಿಂದಿನ ಗಲಭೆ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ಹಾಗೆ ನಡೆದುಕೊಂಡಿದ್ದರಿಂದಲೇ ಇಂತಹ ಕೃತ್ಯಗಳು ಮರುಕಳಿಸಿವೆ.
ಘಟನೆಯಲ್ಲಿ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸಣ್ಣ ವಿಷಯವಲ್ಲ. ಈ ಎಲ್ಲ ಘಟನೆಗಳನ್ನು ನೋಡಿದರೆ ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷ ಪತನವಾಗುವಲ್ಲಿ ಸಂದೇಹವಿಲ್ಲ ಎಂದಿದ್ದಾರೆ.



