ವಿಜಯಸಾಕ್ಷಿ ಸುದ್ದಿ, ಡಂಬಳ: ವರ್ಷವಿಡೀ ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡ ಇದೀಗ ಮತ್ತೆ ಪ್ರಕೃತಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ದಿವ್ಯ ಔಷಧೀಯ ಸಸ್ಯಗಳ ಆಗರವಾಗಿರುವ ಕಪ್ಪತ್ತಗಿರಿಯ ಅರಣ್ಯ ಪ್ರದೇಶದಲ್ಲಿ ನಾನಾ ಬಗೆಯ ಸುವಾಸನೆಯ ಕಾಡು ಹೂಗಳು ಅರಳಿ ಪರಿಸರಾಸಕ್ತರ ಮನ ಸೆಳೆಯುತ್ತಿವೆ.
ಗದಗ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೬೨ ಕಿ.ಮೀ ಉದ್ದ ಹಾಗೂ ೩೩ ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಪ್ಪತ್ತಗಿರಿ, ಮಳೆಯ ಸಿಂಚನಕ್ಕೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಅರಣ್ಯ ಪ್ರದೇಶ ಇನ್ನಷ್ಟು ಜೀವಂತಗೊಂಡಿದ್ದು, ನೂರಾರು ಬಗೆಯ ಹೂಗಳು ಅರಳಿ ಸುವಾಸನೆ ಬೀರುತ್ತಿವೆ. ದುಂಬಿಗಳ ಝೇಂಕಾರ, ಹಕ್ಕಿ-ಪಕ್ಷಿಗಳ ಕಲರವ, ವನ್ಯಜೀವಿಗಳ ಸಂಚಾರ ಹಾಗೂ ಮುಂಜಾನೆ ಗುಡ್ಡದ ಮಡಿಲಲ್ಲಿ ತೇಲಾಡುವ ಬೆಳ್ಳಿ ಮೋಡಗಳು ಕಪ್ಪತ್ತಗಿರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಹೂಗಳ ಪರಿಮಳಕ್ಕೆ ಮನಸೋತ ಪ್ರವಾಸಿಗರು
ರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿರುವ ಕಪ್ಪತ್ತಗುಡ್ಡ ಪ್ರದೇಶದ ದ್ರೋಣಗಿರಿ ಸೇರಿದಂತೆ ಅನೇಕ ಬೆಟ್ಟಗಳ ಸುತ್ತಮುತ್ತ ಕಾಡು ಮಲ್ಲಿಗೆ, ಹೊನ್ನವರೆ, ಡಬ್ಬುಗೊಳಿ, ಕಾಡು ಕನಕಾಂಬರ, ತಾವರೆ, ಸಂಪಿಗೆ, ಕಾಡು ಸೂರ್ಯಕಾಂತಿ, ನೀಲಿ ಕುರುಂಜಿ, ಕಾಡು ಗುಲಾಬಿ, ತಂಗಡಿ ಹೂ, ಬಿಳಿ ಲಿಲಿ, ಕೆಂಪು ಬಲ್ಸಂ ಹಾಗೂ ಕಾಡು ಚಾಮಂತಿ ಸೇರಿ ನೂರಾರು ಬಗೆಯ ಅಪರೂಪದ ಹೂಗಳು ಅರಳಿ ನಿಂತಿವೆ.
ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹರಡುವ ಸುಗಂಧ ಪರಿಸರವನ್ನು ಮತ್ತಷ್ಟು ಮನಮೋಹಕಗೊಳಿಸುತ್ತಿದೆ. ಹೂವಿನ ಮಕರಂದ ಸವಿಯಲು ಜೇನುನೊಣಗಳು ಹಾಗೂ ಬಣ್ಣ ಬಣ್ಣದ ಪತಂಗಗಳು ಗುಂಪುಗೂಡುತ್ತಿರುವ ದೃಶ್ಯ ಕಪ್ಪತ್ತಗುಡ್ಡದ ಎಲ್ಲೆಡೆ ಕಣ್ಮನ ಸೆಳೆಯುತ್ತಿದೆ.

ಔಷಧೀಯ ಸಸ್ಯಗಳ ಅಪರೂಪದ ಭಂಡಾರ
ಕಪ್ಪತ್ತಗಿರಿ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲ, ಅಪರೂಪದ ಔಷಧೀಯ ಸಸ್ಯಗಳ ನೈಸರ್ಗಿಕ ಸಂಗ್ರಹಾಲಯವೂ ಹೌದು. ಬಸವನಪಾದ, ರುದ್ರಾಕ್ಷಿ ಸಪ್ತಪರ್ಣ, ಅನಂತಮೂಲ, ಅಜವಾನ, ಅತ್ತಿ, ಅಡಸೋಗಿ, ಚಿತ್ರಮೂಲ, ಸಂಜೀವಿನಿ, ಕಾಡು ತುಳಸಿ, ಅಮೃತಬಳ್ಳಿ, ರಕ್ತಚಂದನ, ಪಾರಿಜಾತ, ಪುಷ್ಕರಮೂಲ, ಶಂಖಪುಷ್ಪ, ಹಿಪ್ಪಲಿ ಸೇರಿದಂತೆ ನೂರಾರು ಔಷಧೀಯ ಸಸ್ಯಗಳು ಇಲ್ಲಿ ಸಮೃದ್ಧವಾಗಿ ಬೆಳೆಯುತ್ತಿವೆ.
ಅರಣ್ಯ ಇಲಾಖೆ ಸಂರಕ್ಷಿಸಿ ಬೆಳೆಸಿರುವ ವಿವಿಧ ತಳಿಯ ಸಸ್ಯಗಳು ಪರಿಸರ ತಜ್ಞರು, ಸಂಶೋಧಕರು ಹಾಗೂ ಪ್ರಕೃತಿ ಪ್ರಿಯರ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುತ್ತಿವೆ.
ಬೆಂಕಿಯ ಬಳಿಕವೂ ಅರಳಿದ ಹಸಿರು ಜೀವಂತಿಕೆ
ಬೇಸಿಗೆಯಲ್ಲಿ ಕೆಲ ಕಿಡಿಗೇಡಿಗಳಿಂದ ಉಂಟಾದ ಬೆಂಕಿಗೆ ಕೆಲವೆಡೆ ಗಿಡ-ಮರಗಳು ಸುಟ್ಟು ಕರಕಲಾಗಿದ್ದರೂ, ಇದೀಗ ಸುರಿಯುತ್ತಿರುವ ಮಳೆಯಿಂದ ಮತ್ತೆ ಚಿಗುರೊಡೆದು ಹೂ-ಕಾಯಿಗಳನ್ನು ಬಿಟ್ಟಿವೆ. ಪ್ರಕೃತಿಯ ಪುನರುತ್ಥಾನದ ಈ ಅದ್ಭುತ ದೃಶ್ಯ ಪರಿಸರ ಪ್ರಿಯರಿಗೆ ಹೊಸ ಚೈತನ್ಯ ತುಂಬುತ್ತಿದೆ.
ಅರಣ್ಯ ಇಲಾಖೆಯ ಕಣ್ಗಾವಲು
ಮುಂಡರಗಿ ಅರಣ್ಯ ವಲಯಾಧಿಕಾರಿ ಮಂಜುನಾಥ ಆರ್. ಮೇಗಲಮನಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ, ಸಿಸಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಿಂದ ಕಪ್ಪತ್ತಗಿರಿಯ ಪರಿಸರ ಸಂರಕ್ಷಣೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದರ ಫಲವಾಗಿ ಹೂ ಬಳ್ಳಿಗಳು ಹಾಗೂ ಔಷಧೀಯ ಸಸ್ಯಗಳು ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ.
ಪ್ರಕೃತಿ ಮಡಿಲಲ್ಲಿ ಮನಮೋಹಕ ಕ್ಷಣಗಳು
ಕಪ್ಪತ್ತಗುಡ್ಡದ ಗಿರಿ ಸಾಲುಗಳಲ್ಲಿ ಮೃದುವಾಗಿ ಬೀಸುವ ತಂಗಾಳಿ, ಆಕಾಶ ಮುಟ್ಟುವ ಬೆಳ್ಳಿಯಂತ ಮೋಡಗಳು, ವನ್ಯಮೃಗಗಳ ಜಿಗಿದಾಟ, ನವಿಲುಗಳ ನಾಟ್ಯ, ಹಕ್ಕಿಗಳ ಕಲರವ ಹಾಗೂ ಹಸಿರು ಹುಲ್ಲಿನ ಹಾಸು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಅಲ್ಲದೆ ಹಲವು ದಶಕಗಳಿಂದ ಗುಹೆಗಳಲ್ಲಿ ನೆಲೆಸಿರುವ ಸಾಧು-ಸಂತರ ತಪೋಭೂಮಿ, ಕೆರೆಗಳು ಹಾಗೂ ಪ್ರಕೃತಿಯ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತಿವೆ.
“ಈಗಾಗಲೇ ಸುರಿದ ಅಕಾಲಿಕ ಮಳೆ ಹಾಗೂ ಸದ್ಯದ ಮಳೆಯಿಂದ ಕಪ್ಪತ್ತಗುಡ್ಡ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ನೂರಾರು ಔಷಧೀಯ ಸಸ್ಯಗಳು ಹೂ ಬಿಟ್ಟಿವೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ಚಾರಣಕ್ಕೆ ಒತ್ತು ನೀಡಲಾಗಿದೆ. ಪರಿಸರ ಹಾನಿಗೆ ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”ಮಂಜುನಾಥ ಆರ್. ಮೇಗಲಮನಿಅರಣ್ಯ ವಲಯಾಧಿಕಾರಿ, ಕಪ್ಪತ್ತಗುಡ್ಡ, ಮುಂಡರಗಿ ತಾಲೂಕು




