ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಗಂಗಾಮತಸ್ಥರು ಹಾಗೂ ಅಂಬಿಗೇರ, ಬಾರಕೇರ, ಸುಣಗಾರ, ಕಬ್ಬೇರ, ಬೆಸ್ತ ಸೇರಿದಂತೆ 39 ಪರ್ಯಾಯ ಪದಗಳನ್ನು ಹೊಂದಿರುವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಯುವನಾಯಕ ಸಮುದಾಯದ ಪ್ರಧಾನ ಕಾರ್ಯದರ್ಶಿ ಹಾಗೂ ಗಂಗಾಮತಸ್ಥ ನೌಕರರ ಸಂಘದ ರಾಜ್ಯ ನಿರ್ದೇಶಕ ಸಂಗಮೇಶ ಹಾದಿಮನಿ ಆಗ್ರಹಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಗಂಗಾಮತ ಹಾಗೂ ಸಂಬಂಧಿತ ಸಮುದಾಯಗಳ ಜನಸಂಖ್ಯೆ ಅಪಾರವಾಗಿದ್ದು, ನಗರ ಪ್ರದೇಶಗಳಲ್ಲಿ ನೂರಾರು ಬಡ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಈ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸ್ಥಿತಿಯಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬಡತನದ ಕಾರಣಕ್ಕೆ ಮಕ್ಕಳ ಶಿಕ್ಷಣ ಕುಂಠಿತಗೊಳ್ಳಬಾರದು. ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಸಮಾನತೆಯಿಂದ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮೂಲ ವೃತ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಸಾಲ-ಸೌಲಭ್ಯಗಳನ್ನು ಒದಗಿಸಬೇಕು. ಕಡುಬಡತನದಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಮೂಲಕ ಶಿಕ್ಷಣ ಕ್ರಾಂತಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.



