ವಿಜಯಸಾಕ್ಷಿ ಸುದ್ದಿ, ಡಂಬಳ : ಈರುಳ್ಳಿ ಬೆಲೆ ಏರಿಳಿಕೆಯ ಆತಂಕ, ಬೀಜ-ಗೊಬ್ಬರ, ಕಳೆ ತಗೆಯುವುದು ಸೇರಿದಂತೆ ಸಾವಿರಾರು ರೂ ಖರ್ಚು ಮಾಡಿ ಈರುಳ್ಳಿ ಬೆಳೆದು ಕಟಾವು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟಿಗೆ ಕಳಿಸಿ ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅನಿರೀಕ್ಷಿತವಾಗಿ ಈರುಳ್ಳಿ ರಾಶಿಗೆ ನೀರು ನುಗ್ಗಿದ ಪರಿಣಾಮ ರೈತರು ಪರದಾಡಿದ ಘಟನೆ ಡಂಬಳದಲ್ಲಿ ಶನಿವಾರ ನಡೆಯಿತು.
ಸ್ಥಳೀಯ ತೋಂಟದಾರ್ಯ ಮಠದ ಗದಗ-ಮುಂಡರಗಿ ಸಂಪರ್ಕ ರಸ್ತೆಯ ಬಯಲು ಜಾಗೆಯಲ್ಲಿ ಹಲವು ರೈತರು ಈರುಳ್ಳಿ ಕೊಯ್ಲು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅನಿರೀಕ್ಷಿತವಾಗಿ ವಿಕ್ಟೋರಿಯಾ ಕೆರೆಯ ನೀರನ್ನು ಸಣ್ಣ ನೀರಾವರಿ ಇಲಾಖೆಯ ಕಾಲುವೆ ಮೂಲಕ ಹರಿಸುವಾಗ ಕಾಲುವೆಯಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದ್ದರಿಂದ ನೀರು ಎಲ್ಲೆಂದರಲ್ಲಿ ಹರಿದು ನಮ್ಮ ಈರುಳ್ಳಿ ರಾಶಿಗೆ ನುಗ್ಗಿ ಹಾನಿಯಾಗಿದೆ ನಮಗೆ ಅಗತ್ಯ ಪರಿಹಾರ ನೀಡಬೇಕು ಎನ್ನುತ್ತಾರೆ ರೈತರಾದ ಜಯಶ್ರೀ ಸುರಟೂರ ಮತ್ತು ಶ್ರೀಕಾಂತ ಪ್ಯಾಟಿ.
ಸಾಲ ಮಾಡಿ, ದುಬಾರಿ ಗೊಬ್ಬರ, ಕೂಲಿ ಸೇರಿದಂತೆ ಈರುಳ್ಳಿಗೆ ಕನಿಷ್ಠ ಪ್ರತಿ ಎಕರೆಗೆ 50 ಸಾವಿರ ರೂ ಖರ್ಚು ಬರುತ್ತದೆ. ಕಟಾವು ಮಾಡಿ ಸ್ವಚ್ಛಗೊಳಿಸಿ ಸ್ವಲ್ಪ ಒಣಹಾಕಿ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಕಳಿಸುವ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಈರುಳ್ಳಿ ರಾಶಿಗೆ ಕಾಲುವೆ ನೀರು ನುಗ್ಗಿದ್ದರಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಒದ್ದೆಯಾಗಿದೆ. ನಮ್ಮ ಗ್ರಾಮದ ಕೆರೆ ಮತ್ತು ಕಾಲುವೆಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆರೆ ನಿರ್ವಹಣೆಗೆ ಸಮಿತಿ ಮಾಡಬೇಕು. ಸಮರ್ಪಕವಾಗಿ ಕಾಲುವೆ ನಿರ್ವಹಣೆ ಮತ್ತು ಕಾಲುವೆ ದುರಸ್ಥಿಗೆ ಆದ್ಯತೆ ನೀಡಬೇಕು ಎನ್ನುವ ರೈತ ಸಮುದಾಯದಿಂದ ಮಾತುಗಳು ಕೇಳಿ ಬಂದವು.