ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೇಸಿಗೆ ರಜೆಯ ಬಳಿಕ ಮತ್ತೆ ಶಾಲೆಯತ್ತ ಮರಳಿದ ಮಕ್ಕಳ ಕಿಲಕಿಲ ನಗು, ಹೂವಿನ ಸ್ವಾಗತ, ಬಣ್ಣಬಣ್ಣದ ರಂಗೋಲಿ ಹಾಗೂ ಸಂಭ್ರಮದ ವಾತಾವರಣದಿಂದ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆ ಸೋಮವಾರ ಹಬ್ಬದ ಮನೆಯಂತೆ ಕಂಗೊಳಿಸಿತು.
2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಹಾಗೂ ಪಾಲಕ-ಪೋಷಕರ ಮಹಾಸಭೆ ಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಡಗರದಿಂದ ನೆರವೇರಿತು.
ಶಾಲಾ ಆವರಣವನ್ನು ತಳಿರು ತೋರಣ, ಹೂವಿನ ಅಲಂಕಾರ, ಸ್ವಾಗತ ಫಲಕ ಹಾಗೂ ಆಕರ್ಷಕ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರು ಪುಷ್ಪವೃಷ್ಟಿ, ಆರತಿ, ಗುಲಾಬಿ ಹೂವು ಹಾಗೂ ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳ ಮುಖದಲ್ಲಿದ್ದ ನಗು ಮತ್ತು ಉತ್ಸಾಹ ಶಾಲೆಯ ಆವರಣಕ್ಕೆ ಹೊಸ ಚೈತನ್ಯ ತುಂಬಿದಂತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಎಂ. ಶಾರದಮ್ಮ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತಾ ಕಮ್ಮಾರ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ” ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ದಾಖಲಾತಿ ಆಂದೋಲನದ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ನಡೆಸಿದರು. “ಪ್ರತಿಯೊಬ್ಬ ಮಗು ಶಾಲೆಗೆ – ಪ್ರತಿಯೊಂದು ಮನೆ ಶಿಕ್ಷಣದ ಬೆಳಕಿಗೆ”, “ಶಿಕ್ಷಣವೇ ಜೀವನದ ನಿಜವಾದ ಸಂಪತ್ತು”, “ಓದಿ ಬೆಳೆಯೋಣ – ದೇಶ ಕಟ್ಟೋಣ” ಎಂಬ ಘೋಷಣೆಗಳನ್ನು ಕೂಗುತ್ತ ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮಸ್ಥರು ಕೂಡ ಮಕ್ಕಳ ದಾಖಲಾತಿ ಹೆಚ್ಚಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ನಂತರ ನಡೆದ ಪಾಲಕ-ಪೋಷಕರ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಹಾಜರಾತಿ, ಕಲಿಕಾ ಗುಣಮಟ್ಟ, ಶಿಸ್ತು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯದ ಕುರಿತು ಪಾಲಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಿಕ್ಷಕರು ಮಕ್ಕಳ ನಿಯಮಿತ ಹಾಜರಾತಿ ಹಾಗೂ ಮನೆಯಲ್ಲಿ ಅಧ್ಯಯನದ ವಾತಾವರಣ ನಿರ್ಮಿಸುವ ಅಗತ್ಯವನ್ನು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಬಳಿಕ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಚಾಲನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಒಟ್ಟಾಗಿ ಊಟ ಮಾಡುವ ಮೂಲಕ ಸಹಬಾಳ್ವೆಯ ಮೌಲ್ಯಗಳನ್ನು ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿ. ವಿ. ಅಣ್ಣಿಗೇರಿ, ಆರ್. ಡಿ. ಬಡಿಗೇರ, ನೆಹರು ಮನೋಳಿ, ಗೌರಮ್ಮ, ಯು. ಎಸ್. ಕಣವಿ, ಎಸ್. ವಿ. ಗುಗ್ಗರಿ, ಎಸ್‌ಡಿಎಂಸಿ ಸದಸ್ಯರು, ಪಾಲಕ-ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಶಿಕ್ಷಣದ ಹಬ್ಬದಂತಿದ್ದ ಈ ಕಾರ್ಯಕ್ರಮವು ಶಾಲೆ, ಪಾಲಕರು ಹಾಗೂ ಗ್ರಾಮಸ್ಥರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಆಶಾದಾಯಕ ಮತ್ತು ಅರ್ಥಪೂರ್ಣ ಚಾಲನೆ ನೀಡಿದಂತಾಯಿತು.
“ಪ್ರತಿಯೊಬ್ಬ ಮಗುವೂ ಶಾಲೆಯ ಬೆಳಕಿಗೆ ಬರಬೇಕು. ಶಿಕ್ಷಣವೇ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ. ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಗ್ರಾಮೀಣ ಮಕ್ಕಳ ಬದುಕು ಪ್ರಕಾಶಮಾನವಾಗುತ್ತದೆ.”ಸುಜಾತಾ ಕಮ್ಮಾರ, ಎಸ್‌ಡಿಎಂಸಿ ಅಧ್ಯಕ್ಷೆ



