ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ಮಾನವನ ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದು ಬಂದಾಗ ಶ್ರೇಯಸ್ಸು ನಿಶ್ಚಿತ. ಆದರ್ಶ ಬದುಕಿಗೆ ಗುರು ಕಾರುಣ್ಯ, ಧರ್ಮಶ್ರದ್ಧೆ ಅವಶ್ಯಕ. ಧರ್ಮದ ದಿಕ್ಸೂಚಿ ಮಾನವನ ಬಾಳಿನ ಭಾಗ್ಯೋದಯಕ್ಕೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯದ ಪ್ರವೇಶೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಸಕಲರ ಬಾಳಿಗೆ ಬೆಳಕು ತೋರುತ್ತವೆ. ಮುಗುಳವಳ್ಳಿ ಗ್ರಾಮದ ಸಕಲ ಸದ್ಭಕ್ತರ ಸಹಕಾರದಿಂದ ಭವ್ಯ ದಿವ್ಯ ಶ್ರೀ ವೀರಭದ್ರೇಶ್ವರ ದೇವಾಲಯ ನಿರ್ಮಿಸಿರುವುದು ಅತ್ಯಂತ ಸಂತೋಷ ಉಂಟು ಮಾಡುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಭಕ್ತರಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಶುಭವನ್ನು ಅನುಗ್ರಹಿಸಲೆಂದು ಶುಭ ಹಾರೈಸಿದರು.
ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಂತ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಫಲಹಾರಸ್ವಾಮಿ ಮಠದ ಮುರುಘೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಮುಗುಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೃತಿ ಉಮೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಹೆಚ್.ಡಿ. ತಮ್ಮಯ್ಯ, ನಯನ ಮೋಟಮ್ಮ, ವಿ.ಪ ಸದಸ್ಯರಾದ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿ.ಪ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಅ.ಭಾ.ವೀ.ಮ ಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ. ಲೋಕೇಶ್, ಬಿ.ಎ. ಶಿವಶಂಕರ್, ಎಂ.ಎಸ್. ನಿರಂಜನ್, ಬಿ.ಹೆಚ್. ಹರೀಶ್, ಎ.ಎನ್. ಮಹೇಶ್, ಪ್ರೇಮಾ ಮಂಜುನಾಥ್, ಪುಷ್ಪಾ ಸೋಮಶೇಖರ್, ಎಂ.ಎಂ. ಪರಮೇಶ್ವರಪ್ಪ, ಹೆಚ್.ಸಿ. ಕಲ್ಕರುಡಪ್ಪ ಹಾಗೂ ದೇವಾಲಯ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಮುಗುಳವಳ್ಳಿ ಎಂ.ಎನ್. ರೇಣುಕ ಕುಮಾರ್ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಚೈತ್ರಾ ವಸಂತಕುಮಾರ್ ಬಿನ್ನವತ್ತಳೆ ವಾಚಿಸಿದರು. ಕಾರ್ಯದರ್ಶಿ ಎಂ.ಸಿ. ರುದ್ರೇಶ್ ಸರ್ವರನ್ನು ಸ್ವಾಗತಿಸಿದರು. ಎಂ.ಕೆ. ಗಿರಿಜೇಶ ಮತ್ತು ಅಭಿನಯ ಪಶುಕುಮಾರ್ ನಿರೂಪಿಸಿದರು. ಬಿಂದು ಗಿರೀಶ್ ವಂದಿಸಿದರು.
ಸಮಾರಂಭಕ್ಕೂ ಮುನ್ನ ಭವ್ಯ ಮೆರವಣಿಗೆ ಮೂಲಕ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಬರಮಾಡಿಕೊಂಡರು. ನಂತರ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.
ಆಧುನಿಕ ಜಗತ್ತಿನಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಧರ್ಮಶ್ರದ್ಧೆ, ಸಾಮರಸ್ಯ, ರಾಷ್ಟಾçಭಿಮಾನ ಬೆಳೆಸುವ ಗುರಿ ಎಲ್ಲರದಾಗಬೇಕು. ರವಿಕಿರಣದಿಂದ ಪುಷ್ಪ ಅರಳುತ್ತದೆ. ಗುರು ಕಾರುಣ್ಯ ಆತ್ಮವನ್ನು ಅರಳಿಸುತ್ತದೆ ಎಂದು ರಂಭಾಪುರಿ ಶ್ರೀಗಳು ನುಡಿದರು.