ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 9ನೇ ದಿನದತ್ತ ತಲುಪಿದೆ.
ಸೋಮವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ಗದಗ ತಾಲೂಕಿನ ಅಡವಿಸೋಮಾಪುರ (ಸಣ್ಣ ಹಾಗೂ ದೊಡ್ಡ ತಾಂಡಾ), ಮುಂಡರಗಿ ತಾಲೂಕಿನ ಮುರಡಿ, ದಿಂಡೂರ ತಾಂಡಾ, ಶಿರಹಟ್ಟಿ ತಾಲೂಕಿನ ಕೆರಳ್ಳಿ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಮತ್ತು ಕೊಂಡಿಕೊಪ್ಪ ತಾಂಡಾ, ಗಜೇಂದ್ರಗಡ ತಾಲೂಕಿನ ಅಮರಗಟ್ಟಿ ಮತ್ತು ನರೇಗಲ್ ತಾಂಡಾಗಳ ಸಾವಿರಾರು ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಭಾರತ ಸರ್ಕಾರದ ಯುವಜನ ಸೇವಾ ಪ್ರಾಧಿಕಾರದ ಸದಸ್ಯ ಲೋಕೇಶ್ವರ ನಾಯ್ಕ ಎಂ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಅವೈಜ್ಞಾನಿಕ ಒಳಮೀಸಲಾತಿ ಜಾರಿಗೆ ತಂದಿದ್ದು, ಇದು ದೊಡ್ಡ ಮೋಸವಾಗಿದೆ. ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ರಾಜ್ಯ ಮಟ್ಟವಷ್ಟೇ ಅಲ್ಲದೆ, ದೇಶವ್ಯಾಪಿ ಹೋರಾಟಕ್ಕೆ ದಾರಿದೀಪವಾಗಲಿದೆ. ಕೊಲಂಛೊ ಸಮುದಾಯವು ಶತಮಾನಗಳಿಂದ ಹಿಂದುಳಿದ ಸಮಾಜವಾಗಿದ್ದು, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಇನ್ನೂ ಹಿಂದುಳಿದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಒಳಮೀಸಲಾತಿ ವರ್ಗೀಕರಣ ಕ್ರಮವು ಈ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಿದೆ ಎಂದು ಹೇಳಿದರು.
ಉದ್ಯಮಿ ಸೋನು ಲಮಾಣಿ ಮಾತನಾಡಿ, ರಾಜ್ಯಾದ್ಯಂತ ಕೊಲಂಛೊ ಸಮಾಜದ ಯುವಕರು ಹಾಗೂ ಹಿರಿಯರು ಸಂಘಟಿತವಾಗಿ ಹೋರಾಟ ಆರಂಭಿಸಿದ್ದು, ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ಪುನರ್‌ಪರಿಶೀಲಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ಗಮನ ಸೆಳೆಯಲು ಸದ್ಯದಲ್ಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಎದುರು ಧರಣಿ ಮತ್ತು ಮನವಿ ಸಲ್ಲಿಕೆ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರವಿಕಾಂತ್ ಅಂಗಡಿ, ಕೆ.ಸಿ. ನಭಾಪುರ, ಪರಮೇಶ್ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್. ಪೂಜಾರ್, ಟಿ.ಡಿ. ಪೂಜಾರ್, ವಿಠಲ್ ತೋಟದ, ಮನೋಜ್ ಕಾರಬಾರ, ಸಂತೋಷ ಪವಾರ್, ತೇಜಪ್ಪ ನಾಯಕ್, ಷಣ್ಮುಖ ಆರವಾರಿ, ನಾನೊಬ್ಬ ಡಾವು, ಭೀಮಪ್ಪ ಲಮಾಣಿ, ಪಾಂಡಪ್ಪ ನಾಯಕ್, ಹರಿಶ್ಚಂದ್ರ ರಾಮಪ್ಪ ಲಮಾಣಿ, ಪವಾರ್ ಶಿವಪ್ಪ ಲಮಾಣಿ, ರಾಮಪ್ಪ ನಾಯಕ್, ರಾಜು ನಾಯಕ್, ಸೋಮಪ್ಪ ಕಾರಬಾರಿ, ಛತ್ರಪ್ಪ ಲಮಾಣಿ, ತುಕರಾಮ್ ರಾಮಪ್ಪ ನಾಯಕ್, ಶಿವಪ್ಪ ಕಾರಬಾರಿ, ಶಂಕರ್ ಚವಾಣ್, ಫಕೀರೇಶ ನಾಯಕ್, ಪರಮೇಶ್ ಕರಾವಳಿ, ಲಾಲಪ್ಪ ಡಾವು, ಪರಶುರಾಮ್ ಪೂಜಾರಿ ಮತ್ತು ಸೋಮಪ್ಪ ಲಮಾಣಿ ಸೇರಿದಂತೆ ಅಡವಿ ಸೋಮಾಪುರ, ಸಣ್ಣ ಹಾಗೂ ದೊಡ್ಡ ತಾಂಡೆ, ದಿಂಡೂರ, ಕೆರಳ್ಳಿ, ನರೇಗಲ್, ಅಮರಗಟ್ಟಿ, ಅಡರಕಟ್ಟಿ, ಮಹಾಲಿಂಗಪುರ, ಶಿಗ್ಲಿ, ದೊಡ್ಡೂರ ಕಾಲೋನಿ, ಕೊಡಗಾನೂರ, ಸರ್ಜಾಪೂರ ಕೊಂಡಿಕೊಪ್ಪ ಮುಂತಾದ ತಾಂಡಾಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
“ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕ್ರಮದಿಂದ ಕೊಲಂಛೊ ಸಮುದಾಯದ ಜನರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ. ಸರ್ಕಾರವು ಒಳಮೀಸಲಾತಿ ವರ್ಗೀಕರಣದ ವೇಳೆ ನಿಜವಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ರಾಜಕೀಯ ಒತ್ತಡದಡಿ ತೀರ್ಮಾನ ಕೈಗೊಂಡಿದೆ”
– ರವಿಕಾಂತ್ ಅಂಗಡಿ,
ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ
ರಾಜ್ಯ ಪ್ರಧಾನ ಕಾರ್ಯದರ್ಶಿ.



