ಬೆಂಗಳೂರು: ದೇಶ ಅಂದರೆ ಉತ್ತರ ಪ್ರದೇಶ ಹಾಗೂ ಗುಜರಾತ್ ಎರಡೇ ರಾಜ್ಯ ಅಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ. ಕೇಂದ್ರದ ತೆರಿಗೆ ಕಡಿತ ಮಾಡುವ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ದೇಶ ಅಂದರೆ ಉತ್ತರ ಪ್ರದೇಶ ಹಾಗೂ ಗುಜರಾತ್ ಎರಡೇ ರಾಜ್ಯ ಅಲ್ಲ.
ನಮಗೂ ಕೂಡ ಸಮಾನ ಅವಕಾಶ ಸಿಗಬೇಕು ಅದನ್ನ ಕಸಿದುಕೊಳ್ಳುತ್ತಿದ್ದಾರೆ. ರಾಜಕೀಯ ಒಂದು ಕಡೆ ಇಡಿ, ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಇಂಥ ಕಾನೂನು ಮಾಡಿ ನಮ್ಮನ್ನ ಸೆದೆಬಡಿಯುವುದು, ಎಲ್ಲವನ್ನೂ ಮ್ಯಾನೇಜ್ ಮಾಡುವ ಕಲೆ ಬಿಜೆಪಿಯದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಗಳ ಅಭಿವೃದ್ಧಿ ಕುಂಠಿತಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಆಗುತ್ತಿದೆ ನಾವು ನೋಡ್ತಾ ಇದ್ದೇವೆ. ರಾಷ್ಟ್ರ ಹಾಗೂ ರಾಜ್ಯದ ಜನರು ತಿರುಗಿ ಬೀಳಬಹುದು. ತೆರಿಗೆ ಹಣ ಕೊಡಿ ಎಂದು ನಾನು ಮನವಿ ಮಾಡ್ತೇನೆ.
ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ವಿಭಜನೆ ಆಗುತ್ತಿದೆ. ಮಹಿಳಾ ಮೀಸಲಾತಿ ಅನುಮೋದನೆ ಆಗಿದೆ. ಜಾತಿಗಣತಿ ಆಗುವ ಸಾಧ್ಯತೆ ಇದೆ. ಕ್ಷೇತ್ರಗಳನ್ನ ಜಾಸ್ತಿ ಮಾಡಿದರೆ, ಸಂಪೂರ್ಣವಾಗಿ ಉತ್ತರ ಭಾರತದ ಹಿಡಿತಕ್ಕೆ ಹೋಗುತ್ತದೆ. ಬಿಜೆಪಿ ನಾಯಕರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.