ಹಾವೇರಿ: ಮುಂಗಾರು ಮಳೆ ವಿಳಂಬದಿಂದ ಬೆಳೆ ಸಂಪೂರ್ಣ ಹಾಳಾದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ರೈತನೊಬ್ಬ 11 ಎಕರೆ ಮೆಕ್ಕೆಜೋಳ ಬೆಳೆ ಟ್ರ್ಯಾಕ್ಟರ್‌ನಿಂದ ನಾಶಪಡಿಸಿರುವ ಘಟನೆ ಶಿಡೇನೂರ ಗ್ರಾಮದಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ರೈತ ಕಿರಣ ಗಡಿಗೋಳ ಅವರು ಲಾವಣಿಗೆ ಪಡೆದು ಒಟ್ಟು 11 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬೀಜ, ಡೀಸೆಲ್ ಸೇರಿದಂತೆ ಎರಡು ಲಕ್ಷ ರೂ.ಗೂ ಅಧಿಕ ವೆಚ್ಚ ಮಾಡಿದರೂ, ಮಳೆಯ ಕೊರತೆಯಿಂದ ಬೆಳೆ ಸರಿಯಾಗಿ ಮೊಳಕೆಯೊಡೆಯದೆ ನಷ್ಟಕ್ಕೆ ಕಾರಣವಾಗಿದೆ.
ಮಳೆ ನಿರೀಕ್ಷೆ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಬೆಳೆ ಬೆಳೆಯುತ್ತಿದ್ದುದನ್ನು ಗಮನಿಸಿದ ರೈತ ತೀವ್ರ ನಿರಾಶೆಯಿಂದ ಟ್ರ್ಯಾಕ್ಟರ್ ಬಳಸಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ.
ಈ ಘಟನೆಯು ಜಿಲ್ಲೆಯ ಇತರ ರೈತರ ಸಂಕಷ್ಟದ ಪ್ರತಿನಿಧಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಹಾಗೂ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.



