ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಸತ್ಯವನ್ನರಿತು ಪ್ರತಿಯೊಬ್ಬರೂ ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣಬೇಕು. ಮೊದಲ ಗುರುವಾದ ತಾಯಂದಿರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮೌಲ್ಯ, ದೇವರು, ಧರ್ಮ, ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡಿಸಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದಲ್ಲಿ ಲಕ್ಷ್ಮೇಶ್ವರ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಹಮ್ಮಿಕೊಂಡಿದ್ದ `ಅಂರಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬಂತೆ ಮಹಿಳೆಯು ಕುಟುಂಬದ ಪ್ರಗತಿಗಷ್ಟೇ ಅಲ್ಲದೆ, ಎಲ್ಲ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ, ಸೇವೆಯ ಮೂಲಕ ದೇಶದ ಪ್ರಗತಿಗೂ ಕಾರಣಳಾಗಿದ್ದಾಳೆ. ಮಹಿಳೆಯರನ್ನು ಗೌರವ ಮತ್ತು ಸಮಾನತೆ ಭಾವನೆಯಿಂದ ಕಾಣಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿದರೆ ಜೀವನದಲ್ಲಿ ಉತ್ತಮ ಫಲ ಪಡೆಯಬಹುದೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಮತ್ತು ಆ ಮೂಲಕ ಬಲಿಷ್ಠ ರಾಷ್ಟç ನಿರ್ಮಾಣ ಸಾಧ್ಯ. ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೃಷಿ, ಶಿಕ್ಷಣ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕಡೆಗಳಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚುತ್ತಾ ಹೋಗುತ್ತಿದೆ ಎಂದರು.
ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷೆ ವಸಂತಾ ಹುಲ್ಲತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟಮಟ್ಟದ ಕುಸ್ತಿಪಟು ದೊಡ್ಡೂರು ಗ್ರಾಮದ ಜಯಶ್ರೀ ಅಮರಪ್ಪ ಗುಡಗುಂಟಿ ಅವರಿಗೆ ಸಮಾಜದ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುನೀತಾ ಮಂಜುನಾಥ ಮಾಗಡಿ ವಹಿಸಿದ್ದರು.
ಸುಧಾ ಹುಚ್ಚಣ್ಣವರ ನನ್ನಮ್ಮ ಸೂಪರ್‌ಸ್ಟಾರ್ ಕಾರ್ಯಕ್ರಮ ನೆರವೇರಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಅಂದಲಗಿ, ವಕೀಲೆ ನಂದಾ ಅಮಾಸಿ, ಅನ್ನಪೂರ್ಣ ಮಹಾಂತಶೆಟ್ಟರ, ಕೃತಿಕಾ ಮಾಗಡಿ, ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ ಮಾಗಡಿ ಸೇರಿದಂತೆ ಅನೇಕರಿದ್ದರು. ಎಚ್.ಡಿ. ನಿಂಗರಡ್ಡಿ, ಸ್ನೇಹಾ ಹೊಟ್ಟಿ, ಮುಕ್ತಾ ಆದಿ ನಿರೂಪಿಸಿದರು.
ರಾಜ್ಯಮಟ್ಟದ ಶ್ರೇಷ್ಠ ಕೃಷಿ ಮಹಿಳೆ ಪುರಸ್ಕೃತ ರಾಜೇಶ್ವರಿ ಪಾಟೀಲ ಮಾತನಾಡಿ, ಕೃಷಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪತ್ತಾಗಿದೆ. ಪುರುಷ ಮತ್ತು ಕೃಷಿ ಪ್ರಧಾನ ಸಮಾಜದಲ್ಲಿ ಮಹಿಳೆಯರ ಪಾತ್ರವೇ ಮುಖ್ಯವಾಗಿದೆ.
ವಾಸ್ತವದಲ್ಲಿ ಮಹಿಳೆಯರು ಪುರುಷರಿಗೆ ಸಮನಾಗಿ ಮತ್ತು ಅವರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ಮಹಿಳೆ ತನ್ನ ಕುಟುಂಬದ ಪ್ರಗತಿಯ ಜತೆಗೆ ಸುಭದ್ರ, ಸುಸಂಸ್ಕೃತ ರಾಷ್ಟç ನಿರ್ಮಾಣದ ಕಾರಣೀಕರ್ತಳಾಗಿದ್ದಾಳೆ.
ಇಂದಿನ ಆಧುನಿಕ ಕಾಲದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತಹ ಸಾಮರ್ಥ್ಯವನ್ನು ಪಡೆದಿದ್ದಾಳೆ. ಮಹಿಳೆಯರ ಬಗ್ಗೆ ಕೀಳುರಿಮೆ ಬೇಡ, ಹೆಣ್ಣು-ಗಂಡು ಎಂಬ ಭೇದಭಾವ ಮಾಡದೆ ಎಲ್ಲರಿಗೂ ಉತ್ತಮ ಆರೋಗ್ಯ, ಶಿಕ್ಷಣ ನೀಡಬೇಕು ಎಂದರು.