ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಚಿದಾನಂದ ಅವಧೂತರು ರಚಿಸಿದ ದೇವಿ ಪುರಾಣದ 18ನೇ ಅಧ್ಯಾಯದಲ್ಲಿ ದುಷ್ಟರನ್ನು ಸಂಹರಿಸಿ ದೇವಿಯು ವಿಜಯವನ್ನು ಸಾಧಿಸಿದಳು ಎಂಬ ಪುರಾಣದ ಕೊನೆಯ ದಿನದ ಸಂದೇಶವೇ ಮನುಷ್ಯನಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ ವಿಜಯದಶಮಿಯನ್ನು ಆಚರಿಸುವುದಾಗಿದೆ ಎಂದು ಅಡ್ನೂರ ರಾಜೂರು ಬ್ರಹ್ಮಮಠದ ಪಂಚಾಕ್ಷರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಇಲ್ಲಿಯ ಗ್ರಾಮ ದೇವತೆ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ದೇವಿ ಪುರಾಣ ಮುಕ್ತಾಯದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇವಿ ಪುರಾಣದ ಕಥೆಯಲ್ಲಿ ಬರುವ ರಾಕ್ಷಸರು ಕಿವಿಯಿಂದ ಜನಿಸಿದವರು ಎಂದು ಹೇಳಿದ್ದಾರೆ. ಅಂದರೆ ಈ ಪುರಾಣವನ್ನು ನಾವು ಕಿವಿಯಿಂದ ಶ್ರವಣ ಮಾಡುತ್ತೇವೆ. ದೇವಿಯು ಧರ್ಮದ ಸ್ಥಾಪನೆಗಾಗಿ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದಂತೆ ಪುರಾಣದಲ್ಲಿ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ನಾಶಪಡಿಸಿ ವಿಜಯದಶಮಿಯನ್ನು ಆಚರಿಸಬೇಕು. ಅಂದಾಗ ಮಾತ್ರ ಪುರಾಣ ಆಲಿಸಿದವರು ಸಾರ್ಥಕರಾಗುತ್ತಾರೆ ಎಂದು ಸಲಹೆ ನೀಡಿದರು.
ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯ ಹಬ್ಬದ ಆಚರಣೆಗಳು ವೈಜ್ಞಾನಿಕತೆಯಿಂದ ಕೂಡಿವೆ. ನಮ್ಮ ಜೀವನದ ಮೌಲ್ಯ, ನೈತಿಕತೆ, ರಾಷ್ಟ್ರೀಯತೆ, ಆಚಾರ-ವಿಚಾರಗಳನ್ನು ಅರಿತುಕೊಂಡು ಹಬ್ಬಗಳನ್ನು ಆಚರಿಸಬೇಕು. ನಮ್ಮ ಪೂರ್ವಜರ ವೈವಿಧ್ಯತೆಯ ಕಾರ್ಯಕ್ರಮಗಳನ್ನು ಕೇವಲ ಕಟಾಚಾರಕ್ಕೆ ಆಚರಿಸದೇ ಅದರಲ್ಲಿ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದರು.
ಪುರಾಣಕ್ಕೆ ಸಹಾಯ ಹಾಗೂ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ವಿಶ್ವನಾಥ ಶಾಸ್ತಿಗಳು ಪುರಾಣ ಪ್ರವಚನ ಮಂಗಳಕಾರ್ಯ ನಡೆಸಿದರು. ಷಡಕ್ಷರಯ್ಯ ಬದ್ನಿಮಠ ಪಠಣ ಮಾಡಿದರು. ಶಂಕರಪ್ಪ ಬಣವಿ, ಮಲ್ಲಪ್ಪ ಕಲ್ಲೂರ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು. ಕುಬೇರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಅನಸಮ್ಮ ಅಂಬಕ್ಕಿ, ಫಕ್ಕೀರವ್ವ ಬೇಲೇರಿ, ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ ಅರಹುಣಶಿ, ಬಸವರಾಜ ಭೂಮಣ್ಣವರ, ಅಶೋಕ ಬೂದಿಹಾಳ, ಅಶೋಕ ಬಡಿಗೇರ, ಚಂದ್ರು ಬಣವಿ, ಸುರೇಶ ಬಡಿಗೇರ, ಕುಬೇರಪ್ಪ ಕಾಳಪ್ಪ ಬಡಿಗೇರ ವೇದಿಕೆಯಲ್ಲಿದ್ದರು.
ಐತಿಹಾಸಿಕ ಲಕ್ಕುಂಡಿ ಗ್ರಾಮವು ಧಾರ್ಮಿಕ, ಸಾಂಸ್ಕೃತಿಕ ಗ್ರಾಮವಾಗಿದೆ. ಪುರಾತನ ಕಾಲದಿಂದಲೂ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವಿಶಿಷ್ಟವಾಗಿ ನಡೆಯುತ್ತಿವೆ. ಇದರ ನೆನೆಪಿನ ಸಂಕೇತಗಳೇ ಇಲ್ಲಿರುವ ದೇವಾಲಯಗಳು ಮತ್ತು ಕಲ್ಯಾಣಿಗಳು. ಇವುಗಳನ್ನು ಅಭಿವೃದ್ಧಿಪಡಿಸಲು ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲರು ಹಾಗೂ ಶಾಸಕ ಸಿ.ಸಿ. ಪಾಟೀಲರ ಸಹಕಾರದಿಂದ 5 ಕೋಟಿ ರೂ. ವೆಚ್ಚದಲ್ಲಿ 13 ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಈಗ 18 ಕೋಟಿ ರೂ. ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸ್ಥಳವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಿ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸಲಾಗುತ್ತಿದೆ. ಈ ಗ್ರಾಮವನ್ನು ಮಾದರಿ ಗ್ರಾಮವಾಗಿ ರೂಪಿಸಲು ಸಹಕಾರ ನೀಡಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ವಿನಂತಿ ಮಾಡಿಕೊಂಡರು.



