ನಮ್ಮ ಮನಸ್ಸೇಕೆ ಹೀಗೆ….?

0
The mind which is the basis of everything is the source of all the actions of the body
Spread the love

ಹುಚ್ಚುಕೋಡಿ ಮನಸ್ಸು ಅದು ಹದಿನಾರು ವಯಸ್ಸು’ ಎನ್ನುವ ಕವಿವಾಣಿ ಹದಿಹರೆಯದ ಮನೋ ತಲ್ಲಣಗಳನ್ನು ಕಾವ್ಯಮಯವಾಗಿ ಜೋಡಿಸಿದೆ. ವಾಸ್ತವದಲ್ಲಿ ಹಳಿತಪ್ಪಿದ ರೈಲು ಬಂಡಿಯ ಚಿತ್ರಣವನ್ನು ಮನುಷ್ಯನ ಮನಸ್ಸಿನ ಸ್ಥಿತಿಗತಿಗಳಿಗೆ ಹೋಲಿಕೆ ಮಾಡಿ ಹೇಳಿದಂತಿದೆ.

Advertisement

`ಮಾತುಮಾತಿಗೇಕೊ ನಗು ಮರುಘಳಿಗೆಯ ಮೌನ’ ಎನ್ನುವಾಗ ಚಂಚಲಶೀಲ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಈ ಮನಸ್ಸೇಕೆ ಹೀಗೆ ಎಂದು ಪ್ರಶ್ನಾರ್ಥಕವಾಗಿ ನೋಡುವಾಗ, ಮನುಷ್ಯನ ಪ್ರತಿ ಕ್ಷಣದ ಅನುಭವಕ್ಕೆ ಮನಸ್ಸೇ ಕಾರಣ. ಮನಸ್ಸು ಮಾಡಿದರೆ ಗಾಂಧಿನೂ ಆಗಬಹುದು, ಗೋಡ್ಸೆಯೂ ಆಗಬಹುದು.

ಒಳಿತು-ಕೆಡುಕುಗಳ ಸಾಕ್ಷಿ ಈ ಮನಸ್ಸು.ಒಮ್ಮೆ ಖುಷಿ, ಮತ್ತೊಮ್ಮೆ ದುಃಖ. ಹೀಗೆ ಕೋಪ-ತಾಪ, ನೋವು-ನಲಿವುಗಳ ಸಮಿಶ್ರಣ ಈ ಮನಸ್ಸಿನ ಏರಿಳಿತದಲ್ಲಿ ಸಹಜ. ಮನಸ್ಸೊಂದು ನಮ್ಮೊಳಗೆ ಒಬ್ಬ ಉತ್ತಮ ಸ್ನೇಹಿತ, ಆತ್ಮ ಬಂಧು, ಕೆಲವೊಮ್ಮೆ ಪ್ರೀತಿ ಪಾತ್ರ, ಮತ್ತೆ ಕೆಲವೊಮ್ಮೆ ಜನ್ಮಾಂತರದ ವೈರಿ, ಅತಿಶಯದ ಒಡನಾಡಿಯಾಗಿ ಹಲವು ರೀತಿಯಲ್ಲಿ ಆಪ್ತವೆನಿಸುತ್ತದೆ.

ನಮ್ಮೊಳಗೆ ನಾವು ನಮಗಾಗಿ ನಗುವುದು ಕಲಿಸಿದ ನಗೆಗಾರ, ಭಾವಾಂತರಂಗದ ಅಲೆಯೆಬ್ಬಿಸಿದ ಸೊಗಸುಗಾರ, ತಿದ್ದಿ ಬುದ್ಧಿ ಹೇಳಿದ ಮಾರ್ಗದರ್ಶಕ, ಜವಾಬ್ದಾರಿಗಳ ನೆನಪಿಸಿದ ಕಾಯಕಯೋಗಿ, ಅತಿಶಯದ ಅತೀರೇಕಗಳಿಂದ ನಮ್ಮನ್ನೇ ದಿಕ್ಕು ತಪ್ಪಿಸಿದ ಮೋಡಿಗಾರ, ಸಕಲ ಸಿದ್ಧಿಗಳಿಗೂ ದಾರಿ ತೋರಿದ ಪ್ರೇರಕ ಶಕ್ತಿ.ಒಂದೇ ಮಾತಿನಲ್ಲಿ ಹೇಳುವುದಾದರೆ, ನಮ್ಮನ್ನು ದಾಸನನ್ನಾಗಿ ಮಾಡಿ ತಾನು ಅರಸನಾದ ಜಾದೂಗಾರ ಈ ಮನಸ್ಸು.

ಹೀಗೆ ಸರ್ವಕ್ಕೂ ಆಧಾರವಾದ ಮನಸ್ಸು ದೇಹದ ಎಲ್ಲಾ ಕ್ರಿಯೆಗಳಿಗೆ ಮೂಲವಾಗಿದೆ. ಮನ ಉಲ್ಲಸಿತವಾಗಿ ಕ್ರಿಯಾಶೀಲವಾದಾಗ ಮಾತ್ರ ಎಂತಹದೇ ಅದ್ಭುತ ಕಾರ್ಯಗಳನ್ನು ಮಾಡಲು ಸಾಧ್ಯ. ಮನದ ತುಮುಲಗಳಿಗೆ ವಯಸ್ಸಿನ ಮಿತಿ ಇರದು. ಒಂದೊಂದು ವಯೋಮಾನದಲ್ಲಿ ಅದಕ್ಕೆ ಹೊಂದುವ ಅಥವಾ ಹೊಂದದೆಯೋ ಇರುವ ಮನಸ್ಸಿನ ಚಿತ್ರ ವಿಚಿತ್ರವಾದ ಸ್ವಭಾವವನ್ನು ಕಾಣುತ್ತೇವೆ.

ಉದಾಹರಣೆಗೆ `ಪ್ರೀತಿ’ ಎನ್ನುವ ಪದಕ್ಕೆ ಸಿಗುವ ವ್ಯಾಖ್ಯಾನ, ಅನುಭವಗಳು ಭಿನ್ನವಾಗಿರುತ್ತವೆ. ಮಗುತನದಲ್ಲಿ ಪ್ರೀತಿ ಬಾಂಧವ್ಯ ಮಮತೆ ಕಾರುಣ್ಯ ಮುಂದೆ ಬಾಲ್ಯದಲ್ಲಿ, ಯೌವ್ವನದಲ್ಲಿ, ಮಧ್ಯವಯಸ್ಕದಲ್ಲಿ ಹಾಗೂ ಮುಪ್ಪಾವಸ್ಥೆಯಲ್ಲಿ ಅದರದೇ ಆದ ಸ್ವರೂಪವನ್ನು ಪಡೆಯುತ್ತದೆ ಇದು ಸಹಜ ಹಾಗೂ ವಾಸ್ತವೂ ಹೌದು.

ಈ ತರಹ ಮನಸ್ಸಿನಲ್ಲಿ ಮೂಡಿ ಬರುವ ಭಾವನೆಗಳಿಗೆ ತಡೆಗೋಡೆ ಹಾಕಲು ಕಷ್ಟವಾಗಬಹುದು. ಹಾಗಾಗಿ ಮನುಷ್ಯನ ಚಿತ್ತ ಚಂಚಲತೆಗೆ ಈ ಭಿನ್ನ ಹಂತಗಳು, ಅನುಭವಗಳು ಕಾರಣವಾಗುತ್ತವೆ.ಮನಸ್ಸಿಗೆ ಹಿತವಾದದ್ದು, ದೇಹಕ್ಕೆ ಬದುಕಿಗೆ ಅಹಿತವಾಗಿಯೂ ಇರಬಹುದು.

ಉದಾಹರಣೆಗೆ ಸಿಹಿ ತಿನ್ನುವುದು ಮನಸ್ಸಿಗೆ ಹಿತವಾದರೆ, ಕೆಲವೊಮ್ಮೆ ದೇಹಕ್ಕೆ ಅಹಿತವಾಗಿಯೂ ಇರಬಹುದು. ಹಾಗೆಯೇ ಬದುಕಿನ ಬಹುತೇಕ ಸಂಗತಿಗಳು ಮನಸ್ಸಿಗೆ ಹಿತವಾದರೆ, ಬದುಕಿಗೆ ಸಹ್ಯವಾಗಲಾರವು. ಅದು ವಸ್ತು, ವಿಷಯ, ಸಂಗತಿ, ಅಥವಾ ವ್ಯಕ್ತಿಯೇ ಆಗಿರಬಹುದು. ಇದೆಲ್ಲದರ ಆಚೆಗೂ ಪ್ರತಿಯೊಬ್ಬರಲ್ಲೂ ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡುವ ಮನಸ್ಸು ಇದ್ದೇ ಇರುತ್ತದೆ.

ಮನಸ್ಸಿನ ನಕಾರಾತ್ಮಕತೆ ಅದು ಅವರವರ ಅವನತಿಗೆ ಕಾರಣವಾದರೆ, ಸಕಾರಾತ್ಮಕತೆಯು ಬದುಕಿನ ಜೀವಂತಿಕೆಯ ಅನುಭವ ನೀಡುತ್ತದೆ.ದೇಹ ಮನಸ್ಸು ಮತ್ತು ಆತ್ಮ ಈ ಮೂರರ ಅನುಸಂಧಾನ ನಿತ್ಯ ನಿರಂತರವಾದದು. ಮನಸ್ಸು ಆತ್ಮದ ಒಡನಾಡಿಯಾದರೆ ಎಂದೂ ಸಹ ವಿಚಲಿತವಾಗಲಾರದು.

ಆದರೆ ಆತ್ಮದ ಸಾಂಗತ್ಯದಿಂದ ದೂರ ಸರಿದರೆ ಚಂಚಲತೆಗೆ ಸಿಲುಕಿ ವಿಷಯಾಸಕ್ತಿಗಳಲ್ಲಿ ಕಳೆದುಹೋಗುವುದು. ಹೀಗೆ ಬದುಕಿನ ಪ್ರತಿ ಘಟನಾವಳಿಗಳಿಗೆ ಈ ಮನಸೇ ಕಾರಣ, ಪರಿಣಾಮ ಹಾಗೂ ಪರಿಹಾರವೂ ಸಹ ಆಗಬಲ್ಲದು.ಹಾಗಾಗಿ ಮನಸ್ಸೇಕೆ ಹೀಗೆ… ಎನ್ನುವಾಗ ನಿಶ್ಚಿತ ಆಕಾರ, ಬಣ್ಣ, ತೂಕ ಗಾತ್ರವಿರದ ಈ ಅಗೋಚರ ಹಾಗೂ ಎಲ್ಲ ಗೋಚರಕ್ಕೂ ಕಾರಣವಾದ ಮನಸ್ಸಿನ ಬಗ್ಗೆ ತಿಳಿಯುತ್ತಾ ಹೋದಂತೆ ಅನಿರೀಕ್ಷಿತ ತಿರುವುಗಳೇ ಜಾಸ್ತಿ ಕಾಣಸಿಗುತ್ತವೆ ಅಲ್ಲವೇ…?

ಸುಧಾ ಹುಚ್ಚಣ್ಣವರ, ಗದಗ.


Spread the love

LEAVE A REPLY

Please enter your comment!
Please enter your name here