ವಿಜಯಸಾಕ್ಷಿ ಸುದ್ದಿ, ರೋಣ: ಸಮಾಜದ ಕಣ್ಣಲ್ಲಿ ತೃತೀಯ ಲಿಂಗಿಗಳು ಹಲವೊಮ್ಮೆ ಕೇವಲ ಚಪ್ಪಾಳೆ ತಟ್ಟುವ ಕೈಗಳಾಗಿ, ಭಿಕ್ಷೆ ಬೇಡುವ ಮುಖಗಳಾಗಿ ಅಥವಾ ಹಾಸ್ಯದ ವಸ್ತುವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಆ ತಾರತಮ್ಯದ ಗೋಡೆಯನ್ನೇ ಧ್ವಂಸ ಮಾಡಿ, “ನಾವು ಯಾರ ಮುಂದೆಯೂ ಕೈಯೊಡ್ಡುವುದಿಲ್ಲ… ದುಡಿದು ಬದುಕುತ್ತೇವೆ” ಎಂದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರೂಪಾಕ್ಷಪ್ಪ ಕಂಬಳಿ.
ಇದು ಕೇವಲ ಒಬ್ಬ ವ್ಯಕ್ತಿಯ ಬದುಕಿನ ಕಥೆಯಲ್ಲ, ನೂರಾರು ಅವಮಾನ, ಕಣ್ಣೀರು ಮತ್ತು ಹಸಿವಿನ ನಡುವೆಯೂ ಮಣ್ಣನ್ನು ನಂಬಿ ಗೌರವದ ಬದುಕು ಕಟ್ಟಿಕೊಂಡ ಹೋರಾಟದ ಜೀವಂತ ಗಾಥೆ.
ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ, ಸುಮಾರು 20 ವರ್ಷಗಳ ಹಿಂದೆ ತಾನು ತೃತೀಯ ಲಿಂಗಿ ಎಂಬ ಅರಿವಿಗೆ ಬಂದಾಗ ಸಮಾಜದಿಂದ ಅನೇಕ ಹೀಯಾಳನೆ, ಅವಮಾನಗಳನ್ನು ಎದುರಿಸಬೇಕಾಯಿತು. ತಂದೆಯ ನಿಧನದ ನಂತರ ಕುಟುಂಬದ ಹೊರೆ ಇನ್ನಷ್ಟು ಹೆಚ್ಚಾಯಿತು.
ಆದರೆ ವೃದ್ಧ ತಾಯಿ ಮಾತ್ರ ಮಗುವನ್ನು ಕೈಬಿಡದೆ ಆಸರೆಯಾಗಿ ನಿಂತಳು. ತಾಯಿಯನ್ನು ಸಾಕಲು ಹಾಗೂ ಯಾರಿಗೂ ಹೊರೆಯಾಗಬಾರದು ಎಂಬ ಸಂಕಲ್ಪದಿಂದ ರಮೇಶ ಆರಂಭದಲ್ಲಿ ಕುರಿ ಕಾಯುವ ಕೆಲಸಕ್ಕೆ ಇಳಿದರು.
ಬಿಸಿಲು–ಮಳೆ ಎನ್ನದೆ ಕಾಡು–ಮೇಡು ಅಲೆದು ದುಡಿದರೂ ಆ ಬದುಕಿಗೆ ಭದ್ರತೆ ಇರಲಿಲ್ಲ.
ಬದುಕಿಗೆ ದಾರಿಯಾದ ನರೇಗಾ
ರಮೇಶನ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ).
ಸುಮಾರು ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಕಾಮಗಾರಿಯಲ್ಲಿ ಗುದ್ದಲಿ ಹಿಡಿದ ದಿನ, ಅದು ಕೇವಲ ಕೆಲಸವಲ್ಲ… ಸ್ವಾಭಿಮಾನದ ಹೊಸ ಬದುಕಿನ ಆರಂಭವಾಗಿತ್ತು.
ಜಾಬ್ ಕಾರ್ಡ್ ಸಂಖ್ಯೆ KN-14-004-027-002/1562 ಹೊಂದಿರುವ ರಮೇಶ, ಇಂದು ಕೆರೆ ಹೂಳೆತ್ತುವುದು, ಬದು ನಿರ್ಮಾಣ ಸೇರಿದಂತೆ ಕಠಿಣ ಶ್ರಮದ ಕೆಲಸಗಳನ್ನು ಹಸನ್ಮುಖಿಯಾಗಿ ನಿರ್ವಹಿಸುತ್ತಿದ್ದಾರೆ.
ನರೇಗಾ ಕೆಲಸ ಇಲ್ಲದ ದಿನಗಳಲ್ಲಿ ರೈತರ ಹೊಲಗಳಿಗೆ ಕೂಲಿಗೆ ತೆರಳಿ ದುಡಿಯುತ್ತಾರೆ.
ತಮ್ಮ ಬದುಕಿನ ಬಗ್ಗೆ ಮಾತನಾಡುವಾಗ ರಮೇಶನ ಕಣ್ಣಲ್ಲಿ ನೀರು ತುಂಬುತ್ತದೆ.
“ನನ್ನಂತವರಿಗೆ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ನನಗೂ ನಗರಕ್ಕೆ ಹೋಗಿ ಭಿಕ್ಷೆ ಬೇಡಿ ಬದುಕಬಹುದಿತ್ತು. ಆದರೆ ನನಗೆ ನನ್ನ ತಾಯಿಯ ಸಂಸ್ಕಾರ ಮುಖ್ಯ. ಹಳ್ಳಿಯ ಮಣ್ಣಿನಲ್ಲಿ ಬೆವರು ಸುರಿಸಿ ಬರುವ ನೂರು ರೂಪಾಯಿ ಸಾಕು. ನರೇಗಾ ನನಗೆ ಕೆಲಸ ಮಾತ್ರ ಕೊಟ್ಟಿಲ್ಲ… ಸಮಾಜದಲ್ಲಿ ತಲೆಯೆತ್ತಿ ಬದುಕುವ ಗೌರವ ಕೊಟ್ಟಿದೆ” ಎಂದು ಅವರು ಭಾವುಕರಾಗುತ್ತಾರೆ.
ರಮೇಶನ ಬದುಕಿನ ಮತ್ತೊಂದು ವಿಶೇಷವೆಂದರೆ ಸವಡಿ ಗ್ರಾಮದ ಜನರ ಬೆಂಬಲ.
“ಅವನು ನಮ್ಮ ಊರಿನ ಮಗ… ನಮ್ಮಂತೆಯೇ ದುಡಿದು ಬದುಕುತ್ತಿದ್ದಾನೆ” ಎಂದು ಗ್ರಾಮಸ್ಥರು ರಮೇಶನನ್ನು ಸಮಾನವಾಗಿ ಕಾಣುವುದು ಈ ಕಥೆಯ ಅತ್ಯಂತ ಹೃದಯಸ್ಪರ್ಶಿ ಸಂಗತಿ.
ಒಂದು ಎಕರೆ ಒಣ ಜಮೀನು ಹಾಗೂ ಪುಟ್ಟ ಮನೆಯಲ್ಲೇ ತಾಯಿಯ ಜೊತೆ ವಾಸವಿರುವ ರಮೇಶ, ಕಾಯಕವೇ ಬದುಕಿನ ದಾರಿ ಎಂಬ ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ.
‘ಮೈತ್ರಿ’ ಯೋಜನೆಯ ಮಾಸಾಶನದಿಂದ ತಾಯಿಯ ಔಷಧ ವೆಚ್ಚ ನಿರ್ವಹಿಸುತ್ತಿರುವ ರಮೇಶ, ತಮ್ಮ ಬದುಕು ಇನ್ನಷ್ಟು ಸ್ವಾವಲಂಬಿಯಾಗಲು ಸರ್ಕಾರದಿಂದ ವಿಶೇಷ ನೆರವು ನಿರೀಕ್ಷಿಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇರಿದಂತೆ ವಿವಿಧ ಯೋಜನೆಗಳಡಿ ವೈಯಕ್ತಿಕ ಸೌಲಭ್ಯಗಳು ದೊರೆತರೆ ಬದುಕು ಇನ್ನಷ್ಟು ಬಲವಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
“ನರೇಗಾ ನನಗೆ ಕೆಲಸ ಮಾತ್ರ ಕೊಡಲಿಲ್ಲ, ಸಮಾಜದಲ್ಲಿ ತಲೆಯೆತ್ತಿ ಬದುಕುವ ಗೌರವವನ್ನೂ ಕೊಟ್ಟಿದೆ.”
ರಮೇಶ ವಿರೂಪಾಕ್ಷಪ್ಪ ಕಂಬಳಿ
“ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾಗಿ ಬದುಕುತ್ತಿರುವ ರಮೇಶ ಇಡೀ ತಾಲೂಕಿಗೆ ಮಾದರಿ.”
— ಚಂದ್ರಶೇಖರ ಬಿ. ಕಂದಕೂರಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ರೋಣ
“ಕೊನೆಯ ಸ್ತರದ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವುದೇ ನರೇಗಾ ಯೋಜನೆಯ ನಿಜವಾದ ಉದ್ದೇಶ.”
ಸಿ.ಆರ್. ಮುಂಡರಗಿ,
ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಗದಗ



