ತುಮಕೂರು:- ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಮಾರುತಿಯು, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಹೆಸರು ದುರ್ಬಳಕೆ ಮಾಡಿ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚಿಸಿದ್ದ. ಬಂಧಿತ ಮಾರುತಿ ವೃತ್ತಿಯಲ್ಲಿ ಸಿವಿಎಲ್ ಕಂಟ್ರಾಕ್ಟರ್ ಆಗಿದ್ದಾನೆ ಎನ್ನಲಾಗಿದೆ. ಈತ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ.
ತನ್ನ ಲ್ಯಾಪ್ಟಾಪ್ನಲ್ಲಿ ಗೃಹ ಸಚಿವ ಪರಮೇಶ್ವರ್ ಹೆಸರಿನ ನಕಲಿ ಲೇಟರ್ ಹೆಡ್ ಕೂಡ ಇಟ್ಟುಕೊಂಡಿದ್ದ. ತಿರುಪತಿಗೆ ಹೋಗುವ ಭಕ್ತರನ್ನ ಸಂಪರ್ಕಿಸಿ, ವಿಐಪಿ ದರ್ಶನದ ಪಾಸ್ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಜತೆಗೆ, ಅವರಿಂದ 6 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ವರಗೆ ಹಣ ಪಡೆದು ನಕಲಿ ಲೇಟರ್ ಹೆಡ್ ಕೊಟ್ಟು ಕಳುಹಿಸುತ್ತಿದ್ದ.
ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಕಚೇರಿಗೆ ಕರೆ ಮಾಡಿದ್ದ ಮಾರುತಿ, ‘ನಾನು ಕರ್ನಾಟಕ ಗೃಹ ಸಚಿವ ಪರಮೇಶ್ವರ್’ ಎಂದು ಮಾತನಾಡಿದ್ದ. ತನಗೆ ಬೇಕಾದ ಕುಟುಂಬವೊಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದೆ. ಅವರಿಗೆ ದರ್ಶನಕ್ಕೆ ಬೇಕಾದ ಅನುವು ಮಾಡಿಕೊಡಿ. ಇಲ್ಲದಿದ್ದರೆ ನಿಮ್ಮನ್ನು ಅಮಾನತು ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ, ನಕಲಿ ಲೆಟರ್ ಹೆಡ್ ಒಂದನ್ನು ಆಂಧ್ರ ಸಿಎಂ ಕಚೇರಿಯ ನಂಬರ್ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದ.
ಕೂಡಲೇ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳು ಗೃಹ ಇಲಾಖೆ ಗಮನಕ್ಕೆ ತಂದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಪರಮೇಶ್ವರ್, ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣಗೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ತುಮಕೂರು ನಗರ ಠಾಣೆಗೆ ನಾಗಣ್ಣ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.