ವಿಜಯಸಾಕ್ಷಿ ಸುದ್ದಿ, ರೋಣ : ಜಗತ್ತಿಗೆ ಶಾಂತಿ ಹಾಗೂ ಸಹಬಾಳ್ವೆಯನ್ನು ಬೋಧಿಸಿದ ಪ್ರವಾದಿ ಮುಹಮ್ಮದ್ ಪೈಗಂಬರವರ ಜನ್ಮ ದಿನಾಚರಣೆಯನ್ನು ರೋಣ ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ಮುಸ್ಲಿಂ ಭಾಂದವರು ಸೋಮವಾರ ಸಂಭ್ರಮದಿಂದ ಆಚರಿಸಿದರು.
ಈದ್ ಮಿಲಾದ್ ಹಬ್ಬದ ನಿಮಿತ್ತ ಮುಸ್ಲಿಂ ಬಂಧುಗಳು ಬೆಳಿಗ್ಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಗ್ರಾಮೀಣ ಭಾಗಗಳಲ್ಲಿಯೂ ಸಹ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ವಾಹನಗಳಿಗೆ ಹೂವಿನ ಅಲಂಕಾರ ಮಾಡುವ ಮೂಲಕ ಮುಸ್ಲಿಂ ಬಂಧುಗಳು ಹಬ್ಬದ ಸಂತಸವನ್ನು ಹಂಚಿಕೊಂಡರು.
ರೋಣ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಮುಲ್ಲಾನ ಭಾವಿ, ಸೂಡಿ ಕ್ರಾಸ್, ಬಸ್ ನಿಲ್ದಾಣ, ಪಿಡಬ್ಲ್ಯುಡಿ ಕಚೇರಿ ಹತ್ತಿರ ಮುಸ್ಲಿಂ ಬಂಧುಗಳು, ರಿಕ್ಷಾ ಚಾಲಕರು ಮತ್ತು ಮಾಲಿಕರು ಅನ್ನಸಂತರ್ಪಣೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು. ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಬಂಧುಗಳು ಸಿಹಿ ಹಂಚುವ ಮೂಲಕ ಹಬ್ಬವನ್ನು ಆಚರಿಸಿದರು.
ರೋಣ ಪಟ್ಟಣದ ಪೋತರಾಜನ ಕಟ್ಟೆಯ ಬಳಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪ್ರವಾದಿಯವರ ಜೀವನ ಚರಿತ್ರೆ ಕುರಿತು ಮಕ್ಕಳಿಗೆ ವಿವರಿಸಲಾಯಿತು.