ಗದಗ ಜಿಲ್ಲೆಯ ಲಕ್ಕುಂಡಿ… ಇತಿಹಾಸ, ಸಂಪತ್ತು ಮತ್ತು ರಹಸ್ಯಗಳ ಭೂಮಿ! ನಿಧಿ ಪತ್ತೆಯಾದ ಬೆನ್ನಲ್ಲೇ ನಾಳೆಯಿಂದ ಲಕ್ಕುಂಡಿಯಲ್ಲಿ ಮತ್ತೆ ಭಾರೀ ಉತ್ಖನನ ಕಾರ್ಯಕ್ಕೆ ಚಾಲನೆ ಸಿಗಲಿದೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಿಂದ ಅಧಿಕೃತವಾಗಿ ಉತ್ಖನನ ಆರಂಭವಾಗಲಿದೆ ಎಂದು ಲಕ್ಕುಂಡಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಾಟೀಲ್ ಹಾಗೂ ಆಯುಕ್ತ ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.
ಲಕ್ಕುಂಡಿ ಎಂದರೆ ಕೇವಲ ದೇವಸ್ಥಾನಗಳ ಪಟ್ಟಣವಲ್ಲ… ಇದು ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆಯ ಆಳ್ವಿಕೆಯ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತ ನಾಡು. ಶಿಲ್ಪಕಲೆಯ ಜೊತೆಗೆ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಮುತ್ತು, ನೀಲಮಣಿ ಸೇರಿದಂತೆ ಅಪಾರ ಸಂಪತ್ತು ಭೂಮಿಯೊಳಗೆ ಹುದುಗಿದೆ ಎಂಬ ನಂಬಿಕೆ ಬಲವಾಗಿದೆ.
2024ರ ನವೆಂಬರ್‌ನಲ್ಲಿ ನಡೆದ ಅನ್ವೇಷಣೆಯಲ್ಲೇ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ನಿಧಿ ಸಿಕ್ಕಿರುವ ಬೆನ್ನಲ್ಲೇ ಉತ್ಖನನ ಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ. ಅನೇಕ ಭಾಗಗಳಲ್ಲಿ ಇಂದಿಗೂ ರತ್ನ, ಹವಳ, ವಜ್ರ, ವೈಡೂರ್ಯದಂತಹ ವಸ್ತುಗಳು ದೊರೆಯುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ, ಸಿದ್ದರಬಾವಿ, ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ಸುಮಾರು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ಖನನ ನಡೆಯುತ್ತಿದೆ.
ಇದಕ್ಕೂ ಮೊದಲು 2004-05ರಲ್ಲಿ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ನಡೆದ ಉತ್ಖನನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಮಹತ್ವದ ಕುರುಹುಗಳು ಪತ್ತೆಯಾಗಿದ್ದವು. ಈಗಿನ ಉತ್ಖನನದಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು, ಶಿಲ್ಪಕಲೆ, ಸ್ಮಾರಕಗಳು ಹಾಗೂ ಅಪರೂಪದ ಆಭರಣಗಳು ಸಿಕ್ಕುವ ಸಾಧ್ಯತೆ ಇದೆ.
ಒಟ್ಟಾರೆ, ಲಕ್ಕುಂಡಿಯ ಭೂಮಿ ಮತ್ತೆ ದೇಶದ ಗಮನ ಸೆಳೆಯಲು ಸಿದ್ಧವಾಗಿದೆ.



