HomeGadag Newsಆತ್ಮಶುದ್ಧಿಗೆ ‘ಶಾಂತಿನಾಥ ವಿಧಾನ’ದ ಮಹತ್ವ: ಮುನಿಶ್ರೀ ವಿದಿತಸಾಗರ ಮಹಾರಾಜರು

ಆತ್ಮಶುದ್ಧಿಗೆ ‘ಶಾಂತಿನಾಥ ವಿಧಾನ’ದ ಮಹತ್ವ: ಮುನಿಶ್ರೀ ವಿದಿತಸಾಗರ ಮಹಾರಾಜರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜೈನ ಧರ್ಮದ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಹಾಗೂ ಕರ್ಮಗಳ ವಿನಾಶಕ್ಕೆ ಮಹತ್ವದ ಸಾಧನಗಳಾಗಿದ್ದು, ‘ಶ್ರೀ ಶಾಂತಿನಾಥ ವಿಧಾನ’ ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಪರಮಪೂಜ್ಯ ಮುನಿಶ್ರೀ ವಿದಿತಸಾಗರ ಮಹಾರಾಜರು ಹೇಳಿದರು.

ನಗರದ ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೈನ ಪರಂಪರೆಯ 16ನೇ ತೀರ್ಥಂಕರರಾದ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ಯಾಗಿ ಆರಾಧಿಸಲಾಗುತ್ತದೆ. ಈ ವಿಧಾನ ಆಚರಿಸುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯ ದೂರವಾಗಿ ಅಹಿಂಸೆ ಮತ್ತು ವಿಶ್ವಶಾಂತಿಯ ಸಂದೇಶ ಬಲಗೊಳ್ಳುತ್ತದೆ ಎಂದು ತಿಳಿಸಿದರು.

ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬ ಜೀವನದಲ್ಲಿನ ವಿಘ್ನಗಳು ಹಾಗೂ ಪ್ರಾಕೃತಿಕ ವಿಕೋಪಗಳಿಂದ ರಕ್ಷಣೆಗಾಗಿ ಈ ವಿಧಾನವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ ಹಾಗೂ ಅರ್ಘ್ಯ ಎಂಬ ಅಷ್ಟದ್ರವ್ಯಗಳಿಂದ ತೀರ್ಥಂಕರರಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ ಎಂದು ವಿವರಿಸಿದರು.

ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ಗದಗ ಪ್ರದೇಶದಲ್ಲಿ 7ನೇ ಶತಮಾನದಿಂದಲೇ ಜೈನ ಮುನಿಗಳು ಹಾಗೂ ಆರ್ಯಿಕೆಯರು ಧರ್ಮಪ್ರಭಾವನೆ ನಡೆಸುತ್ತ ಬಂದಿದ್ದು, ಆ ಪರಂಪರೆಯನ್ನು ಮುನಿಶ್ರೀ ವಿದಿತಸಾಗರ ಮಹಾರಾಜರು ಮುಂದುವರಿಸುತ್ತಿರುವುದು ಜಿಲ್ಲೆಯ ಜೈನ ಸಮಾಜದ ಸೌಭಾಗ್ಯ ಎಂದರು.

ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಗದಗ ನಗರದಲ್ಲಿ ಬಸದಿ ಹಾಗೂ ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವ ಭರವಸೆಯನ್ನು ಸಚಿವ ಎಚ್.ಕೆ. ಪಾಟೀಲ ನೀಡಿದ್ದಾರೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಶೀಘ್ರದಲ್ಲೇ ಬಸದಿ ನಿರ್ಮಿಸಿ ಜೈನ ಧಾರ್ಮಿಕ ಮತ್ತು ಲೋಕಕಲ್ಯಾಣ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಸಂಜೀವಕುಮಾರ್ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಷ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವೈ. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಶ್ರಾವಕ-ಶ್ರಾವಿಕೆಯರು ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಕಾಶ ಮುತ್ತಿನ ವಂದಿಸಿದರು. ಶಾಂತಿನಾಥ ತೀರ್ಥಂಕರರಿಗೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮ ಸಂಪನ್ನವಾಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img