ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಬೊಕ್ಕಸ ಮತ್ತಷ್ಟು ಸಮೃದ್ಧವಾಗಿದೆ. ಅಂತೇಯೇ ರಾಜ್ಯದ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 50 ಕೋಟಿ ರೂ ಅನುದಾನ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಮಟ್ಟ ಎತ್ತರಕ್ಕೇರಿದೆ. ಪಂಚ ಗ್ಯಾರಂಟಿ ಯೋಜನೆಯಿಂದ ಪ್ರತಿ ತಿಂಗಳಿಗೆ ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ನಷ್ಟು ಸಹಾಯವಾಗುತ್ತಿದೆ. ಇದು ಬಡತನ ಮುಕ್ತ-ಹಸಿವು ಮುಕ್ತ ಕರ್ನಾಟಕಕ್ಕೆ ನಾಂದಿಯಾಗಿದೆ. ರಾಜ್ಯದಲ್ಲಿ ಎಲ್ಲರೂ ಸ್ವಾವಲಂಬಿಯಾಗಿ ಜೀವನ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಬಡವರು, ಕೂಲಿಕಾರರು, ಬೀದಿಬದಿ ವ್ಯಾಪಾರಸ್ಥರು, ಶ್ರಮಿಕರು ಸೇರಿ ಆರ್ಥಿಕವಾಗಿ ಹಿಂದುಳಿದವರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಗದಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಸದುಪಯೋಗವನ್ನು ಶೇ. 99ರಷ್ಟು ಫಲಾನುಭವಿಗಳು ಪಡೆದಿದ್ದಾರೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಯೋಜನೆ ಬಡವರ ಪಾಲಿಗೆ ಮಹತ್ವಾದ್ದಾಗಿದೆ. ಆದರೆ ಯೋಜನೆಯ ಉದ್ದೇಶಗಳನ್ವಯ ನಿರಂತರ ಸೇವೆ, ಸಮರ್ಪಕ ನಿರ್ವಹಣೆಯಾಗಬೇಕು. ಶಿರಹಟ್ಟಿ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್ ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಲಕ್ಷ್ಮೇಶ್ವರದಲ್ಲಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್‌ನಿಂದಲೇ ಪುರಸಭೆಯವರು ಪೌರ ಕಾರ್ಮಿಕರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಅಮೃತ 2.0 ಯೋಜನೆಯಡಿ ಹೆಚ್ಚುವರಿ ಅನುದಾನ ಕಲ್ಪಿಸಬೇಕು. ಬೆಳೆಯುತ್ತಿರುವ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಕೆಪಿಸಿಸಿ ಸದಸ್ಯರಾದ ಆನಂದ ಗಡ್ಡದೇವಮಠ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ನಾಗರಾಜ ಮಡಿವಾಳರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್‌ಪಿ ರೋಹನ್ ಜಗದೀಶ, ಪುರಸಭೆ ಉಪಾಧ್ಯಕ್ಷ ಫಿರ್ದೋಸ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಸೇರಿ ಪುರಸಭೆ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಜಿಲ್ಲಾ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ ಸ್ವಾಗತಿಸಿದರು. ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಇಂಜಿನಿಯರ್ ವಿ.ಪಿ. ಕಾಟೇವಾಲೆ, ಮಂಜುನಾಥ ಮುದಗಲ್, ಈಶ್ವರ ಮೆಡ್ಲೇರಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಒಳಚರಂಡಿ ಸ್ವಚ್ಛತೆ ಸಲುವಾಗಿ 50 ಲಕ್ಷ ರೂ ವೆಚ್ಚದಲ್ಲಿ ಖರೀದಿಸಿದ ಸಕ್ಕಿಂಗ್ ಮಷಿನ್ ವಾಹನಕ್ಕೂ ಸಚಿವರು ಚಾಲನೆ ನೀಡಿದರು.
ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಮೆನುವಿನಂತೆ ಉಪಾಹಾರ, ಊಟ ಸಿಗಬೇಕು ಮತ್ತು ಸ್ವಚ್ಛತೆ, ಶುಚಿತ್ವ ಕಡ್ಡಾಯವಾಗಿ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಸದಸ್ಯರು ನಿಗಾ ವಹಿಸಬೇಕು. ಲಕ್ಷ್ಮೇಶ್ವರ ಪಟ್ಟಣ ಐತಿಹಾಸಿಕ ಶ್ರೀಮಂತಿಕೆಯನ್ನು ಹೊಂದಿದೆ. ಗದಗ- ಲಕ್ಷ್ಮೇಶ್ವರ ರಸ್ತೆ ನಿರ್ಮಾಣ, ತುಂಗಭದ್ರಾ ನದಿಯಿಂದ ನೀರು ಪೂರೈಸುವ ಕುಡಿಯುವ ನೀರಿನ ಯೋಜನೆ ಮೇಲ್ದರ್ಜೆಗೇರಿಸುವುದು ಸೇರಿ ಈ ಭಾಗದ ಜನರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.